ಫೆಲೋಶಿಪ್-ವಿದ್ಯಾರ್ಥಿವೇತನಗಳ ಕಡಿತ: ಮೇಲ್ಮನೆಯಲ್ಲಿ ವಿಪಕ್ಷಗಳ ಆಕ್ಷೇಪ
ಬೆಂಗಳೂರು, ಡಿ.10: ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಹಾಗೂ ವಿದ್ಯಾರ್ಥಿ ವೇತನಗಳನ್ನು ಕಡಿತ ಮಾಡಿರುವುದಕ್ಕೆ ಮೇಲ್ಮನೆಯಲ್ಲಿ ವಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಗುರುವಾರ ವಿಧಾನಪರಿಷತ್‍ನಲ್ಲಿ ವಿತ್ತೀಯ ಕಾರ್ಯಕಲಾಪಗಳ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ರಾಜ್ಯ ಸರಕಾರ ಆರ್ಥಿಕ ಸಂಕಷ್ಟ ಕಾಲದಲ್ಲೂ ದುಂದುವೆಚ್ಚ ಮಾಡುತ್ತಿದೆ. ಆದ್ಯತೆ ಮೇರೆಗೆ ಕೆಲಸ ಮಾಡುವ ಇಲಾಖೆಗಳಿಗೆ ಹಣ ನೀಡುತ್ತಿಲ್ಲ ಎಂದ ಅವರು, ಎಸ್ಸಿ-ಎಸ್ಟಿ, ಓಬಿಸಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವ ವಿದ್ಯಾರ್ಥಿ ವೇತನಗಳಿಗೂ ಕಡಿವಾಣ ಹಾಕಿದೆ ಎಂದು ಆಪಾದಿಸಿದರು.
ರಾಜ್ಯ ಸರಕಾರ ಆದಾಯಕ್ಕೆ ಸೀಮಿತವಾಗಿ ಖರ್ಚುಗಳನ್ನು ನಿಭಾಯಿಸಬೇಕು. ಅದನ್ನು ಬಿಟ್ಟು ಶಕ್ತಿ ಮೀರಿ ಸಾಲ ಮಾಡುವ ಪ್ರಯತ್ನ ಮಾಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಅದಕ್ಕೆ ಉತ್ತರಿಸಿದ ಸಚಿವ ಬಸವರಾಜ ಬೊಮ್ಮಾಯಿ, ಎಸ್ಸಿ-ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀಡುವಂತಹ ಯಾವುದೇ ಫೆಲೋಶಿಪ್, ವಿದ್ಯಾರ್ಥಿ ವೇತನಗಳಿಗೆ ಕಡಿವಾಣ ಹಾಕಿಲ್ಲ. ಅದು ಬಜೆಟ್‍ನಲ್ಲಿ ಇರುವುದರಿಂದ ಪ್ರತ್ಯೇಕವಾಗಿ ಮಾಡಲು ಆಗಲ್ಲ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್, ಈಗಾಗಲೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುದಾನ ಕಡಿತವಾಗಿದೆ ಎಂದರು. ಅದಕ್ಕೆ ಧ್ವನಿಗೂಡಿಸಿದ ನಸೀರ್ ಅಹಮದ್, ಈ ಹಿಂದೆ ಅಲ್ಪಸಂಖ್ಯಾತ ಮೆಡಿಕಲ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೂರೂವರೆ ಲಕ್ಷದಷ್ಟು ಇದ್ದದ್ದನ್ನು ಈಗ ಎರಡು ಲಕ್ಷಕ್ಕಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಇದಕ್ಕೆ ಧ್ವನಿಗೂಡಿಸಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸರಕಾರ ಮಠಗಳಿಗೆ, ದೇವಸ್ಥಾನಗಳಿಗೆ ಹಣ ನೀಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹಣ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಸರಕಾರ ಹಣ ಖರ್ಚು ಮಾಡುವಲ್ಲಿ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ಅನುದಾನ ರಹಿತ ಶಾಲೆಗಳಲ್ಲಿ ದುಡಿದ ಶಿಕ್ಷಕರಿಗೆ ಏನಾದರೂ ಆರ್ಥಿಕ ಸಹಾಯ ಮಾಡಲು ಮುಂದಾಗಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.







