ಮಾರ್ಗಗಳನ್ನು ಹರಾಜಿಗೆ ಹಾಕಿದರೆ ಆದಾಯ ಬರಲಿದೆ: ಸಿ.ಎಂ. ಇಬ್ರಾಹಿಂ

ಬೆಂಗಳೂರು, ಡಿ.10: ಸಾರಿಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಮಾರ್ಗಗಳನ್ನು ಹರಾಜು ಹಾಕಿದರೆ ಸರಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಕಾಂಗ್ರೆಸ್‍ನ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ.
ವಿಧಾನಪರಿಷತ್‍ನಲ್ಲಿ ಪೂರಕ ಬಜೆಟ್ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 18-20 ಸಾವಿರ ಬಸ್‍ಗಳಿವೆ. 18 ಸಾವಿರ ಬಸ್‍ಗಳನ್ನು ಇಟ್ಟುಕೊಂಡಿದ್ದರೂ ಸಾರಿಗೆ ನಿಗಮ ಸಾಲದ ಮೊರೆ ಹೋಗುತ್ತಿದೆ ಎಂದರು.
ಸಿದ್ದರಾಮಯ್ಯ ಸರಕಾರದಲ್ಲಿ ನಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದಾಗ ಕೆಲ ಶಿಫಾರಸ್ಸುಗಳನ್ನು ಮಾಡಿದ್ದೇನೆ. ಅವನ್ನು ತೆಗೆದು ನೋಡಿ ಎಂದ ಅವರು, ಸರಕಾರ ಸಾರಿಗೆಯ ಕೆಲ ರೂಟ್‍ಗಳನ್ನು ಆಕ್ಷನ್ ಮಾಡಿದರೆ 1600 ಕೋಟಿ ಆದಾಯ ಬರತ್ತೆ. ಪ್ರತಿ ಕಿ.ಮೀ. ಎಷ್ಟು ಡಿಸೇಲ್ ಬಳಕೆಯಾಗುತ್ತದೆ ಎಂಬ ಲೆಕ್ಕ ಯಾರ ಬಳಿಯೂ ಇಲ್ಲ. ಸಾರಿಗೆ ಇಲಾಖೆಯಲ್ಲಿನ ಸೋರಿಕೆ ತಪ್ಪಿಸಿ ರೂಟ್‍ಗಳನ್ನು ಹರಾಜು ಹಾಕಿದರೆ ವರ್ಷಕ್ಕೆ 2500-3000 ಆದಾಯ ಬರುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರವನ್ನು ತೆಗೆದು ಹಾಕುವುದು ಯಾರು ಅಧಿಕಾರಕ್ಕೆ ಬಂದರೂ ಕಷ್ಟ. ಭ್ರಷ್ಟಾಚಾರವೇ ಶಿಷ್ಟಾಚಾರ ಆಗಿ ಹೋಗಿದೆ. ಇಂದಿರಾ ಕ್ಯಾಂಟೀನ್‍ನ್ನು ತೆಗೆಯಬೇಡಿ. ಅಲ್ಲಿ ದುರುಪಯೋಗವಾಗುತ್ತಿದ್ದರೆ ಅದನ್ನು ತಡೆಯಬೇಕಾದರೆ ಫಲಾನುಭವಿಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿ ಎಂದು ಸಲಹೆ ನೀಡಿದರು.





