ವಿವಾದಿತ ಮಸೂದೆಗಳ ವಿರುದ್ಧ ರೈತರ ಆಕ್ರೋಶ
"ರಾಜ್ಯಪಾಲರು ಸಹಿ ಹಾಕಿದರೆ, ಹೋರಾಟ ತೀವ್ರ"

ಬೆಂಗಳೂರು, ಡಿ.10: ಭೂ-ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ಇನ್ನಿತರೆ ರೈತ ವಿರೋಧಿ ಕಾಯ್ದೆಗಳಿಗೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸಿ ಸಹಿ ಹಾಕಬಾರದೆಂದು ಒತ್ತಾಯಿಸಿ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರವೂ ರೈತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ರೈತರು, ರಾಜಭವನ ಮುತ್ತಿಗೆ ಚಲೋ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಫ್ರೀಡಂ ಪಾರ್ಕ್ ಮೈದಾನದಲ್ಲಿಯೇ ಹೋರಾಟಗಾರರನ್ನು ತಡೆದರು.
ಬಳಿಕ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಐಕ್ಯ ಸಮಿತಿಯ ಪ್ರಮುಖರಾದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಈ ಜನವಿರೋಧಿ ಕಾಯ್ದೆಗೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಸಹಿ ಹಾಕಬಾರದು. ಒಂದು ವೇಳೆ ಸಹಿ ಹಾಕಿದರೆ, ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಮಾದರಿಯಲ್ಲಿ ಬೆಂಗಳೂರನ್ನು ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕೂಡಲೇ ನಾಟಕ ನಿಲ್ಲಿಸಬೇಕು ಎಂದ ಅವರು, ಕೆಲವರು ರೈತರ ಪರ ಎಂದು ಹೇಳಿಕೊಂಡು ರೈತರನ್ನೇ ಮೋಸ ಮಾಡುತ್ತಿದ್ದಾರೆ. ಈ ಕಾಯ್ದೆಗಳು ಮಾರಕವಾಗಿದ್ದು, ಹೀಗಾಗಿಯೇ ನಾವು ಪ್ರತಿಭಟನೆ ಮುಂದುವರೆಸಿದ್ದೇವೆ ಎಂದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರಕಾರ ಕಾಯ್ದೆಯನ್ನು ಅಂಗೀಕರಿಸಿ ನಮ್ಮನ್ನು ಮಾತುಕತೆಗೆ ಕರೆದಿದೆ. ಆದರೆ, ಇದು ಸರಕಾರದ ಪೂರ್ವಯೋಜಿತ ನಾಟಕ. ಹಾಗಾಗಿ ನಾವು ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಐಕ್ಯ ಹೋರಾಟ ಸಮಿತಿಯ ಪ್ರಮುಖರಾದ ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಕುಮಾರ್ ಸಮತಳ, ಡಿ.ಎಚ್.ಪೂಜಾರ್ ಸೇರಿದಂತೆ ಪ್ರಮುಖರಿದ್ದರು.
ನೂಕಾಟ, ತಳ್ಳಾಟ: ಪ್ರತಿಭಟನೆ ವೇಳೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ನೂಕಾಟ, ತಳ್ಳಾಟ ನಡೆಯಿತು.
ಪ್ರತಿಭಟನಾಕಾರರ ನಿರ್ಧಾರದಂತೆ ಗುರುವಾರ ಸಂಜೆ ವೇಳೆಗೆ ರಾಜಭವನಕ್ಕೆ ಮುತ್ತಿಗೆ ಹಾಕಬೇಕಿತ್ತು. ಫ್ರೀಡಂ ಪಾರ್ಕ್‍ನಿಂದ ರಾಜಭವನದತ್ತ ಹೊರಡುತ್ತಿದ್ದಂತೆ ರೈತರನ್ನ ಪೆÇಲೀಸರು ತಡೆಯಲು ಪ್ರಯತ್ನಿಸಿದರು. ಈ ವೇಳೆ ಪೆÇಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ, ತಳ್ಳಾಟದ ದೃಶ್ಯ ಕಂಡುಬಂದಿತು.
ಜಿಯೋ ಬಳಕೆ ವಿರೋಧಿಸಿ ಪ್ರತಿಭಟನೆ
ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಐಕ್ಯ ಸಮಿತಿಯಿಂದ ನಡೆದ ರಾಜಭವನ ಮುತ್ತಿಗೆ ಸಂದರ್ಭದಲ್ಲಿ ಜಿಯೋ ಸಿಮ್ ಮೊಬೈಲ್ ಪೆÇೀರ್ಟ್ ಮಾಡಿ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.
ಅಂಬಾನಿ, ಅದಾನಿ ಕಂಪನಿಯ ವಸ್ತುಗಳ ಖರೀದಿ ಬೇಡ ಎಂದ ವಿದ್ಯಾರ್ಥಿಗಳು, ರಿಲಯನ್ಸ್ ಜಿಯೋ ಕಂಪೆನಿಯ ಮೊಬೈಲ್ ಸಂಖ್ಯೆಗಳನ್ನು ಪೋರ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಭದ್ರತೆ
ರೈತರ ಮತ್ತು ಸಾರಿಗೆ ನೌಕರರು ವಿಧಾನಸೌಧ ಮುತ್ತಿಗೆಗೆ ಕರೆ ನೀಡಿದ್ದ ಹಿನ್ನೆಲೆ ನಗರದೆಲ್ಲೆಡೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇಲ್ಲಿನ ವಿಧಾನಸೌಧ, ರಾಜಭವನ, ಮುಖ್ಯಮಂತ್ರಿಗಳ ನಿವಾಸದ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.







