ಕೃಷಿ ಕಾಯ್ದೆ ಕುರಿತ ಪ್ರಸ್ತಾವ ಪರಿಗಣಿಸಿ: ರೈತರನ್ನು ಆಗ್ರಹಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಡಿ. 9: ಕೇಂದ್ರ ಸರಕಾರದ ಪ್ರಸ್ತಾವಗಳನ್ನು ಪರಿಗಣಿಸುವಂತೆ ರೈತ ಒಕ್ಕೂಟದ ನಾಯಕರನ್ನು ಆಗ್ರಹಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ತಾನು ರೈತರೊಂದಿಗೆ ಮುಂದಿನ ಮಾತುಕತೆಗೆ ಸಿದ್ಧ ಎಂದಿದ್ದಾರೆ.
''ನೂತನ ಕೃಷಿ ಕಾಯ್ದೆಯ ಯಾವುದೇ ನಿಯಮಗಳ ಬಗ್ಗೆ ರೈತರಿಗೆ ಸಮಸ್ಯೆ ಇದ್ದರೆ ಅದನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಲು ಕೇಂದ್ರ ಸರಕಾರ ಸಿದ್ಧವಿದೆ. ಅಲ್ಲದೆ, ನಾವು ಅವರ ಎಲ್ಲಾ ಆತಂಕಗಳಿಗೆ ಸ್ಪಷ್ಟನೆ ನೀಡುತ್ತೇವೆ'' ಎಂದು ತೋಮರ್ ಹೇಳಿದ್ದಾರೆ. ''ಆತಂಕ ನಿವಾರಿಸಲು ರೈತರ ಸಲಹೆಗಳಿಗಾಗಿ ನಾವು ಕಾಯುತ್ತಿದ್ದೇವೆ. ಆದರೆ, ಅವರು ಕಾಯ್ದೆಯನ್ನು ಹಿಂಪಡೆಯಬೇಕು ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ'' ಎಂದು ಅವರು ತಿಳಿಸಿದರು. ''ಶೀತ ವಾತಾವರಣದಲ್ಲಿ ಹಾಗೂ ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ರೈತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ನಮಗೆ ಆತಂಕವಿದೆ.
ಕೇಂದ್ರ ಸರಕಾರದ ಪ್ರಸ್ತಾವವನ್ನು ರೈತರ ಒಕ್ಕೂಟ ಶೀಘ್ರ ಪರಿಗಣಿಸಬೇಕು. ಅನಂತರ ಅಗತ್ಯವಿದ್ದರೆ, ಮುಂದಿನ ಸಭೆಯನ್ನು ನಾವು ಪರಸ್ಪರ ನಿರ್ಧರಿಸಲು ಸಾಧ್ಯ'' ಎಂದು ಅವರು ಹೇಳಿದರು. ಕೃಷ್ಯುತ್ಪನ್ನಗಳನ್ನು ಖರೀದಿಸುವಲ್ಲಿ ಈಗಿರುವ ಕನಿಷ್ಠ ಬೆಂಬಲ ಬೆಲೆ ಮುಂದುವರಿಸುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ರೈತರಲ್ಲಿ ಪ್ರಸ್ತಾವಿಸಿತ್ತು. ಆದರೆ, ರೈತರ ಒಕ್ಕೂಟ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆಯುವ ತಮ್ಮ ಬೇಡಿಕೆಯನ್ನು ಸರಕಾರ ಈಡೇರಿಸುವ ವರೆಗೆ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರೈತರ ಒಕ್ಕೂಟ ಹೇಳಿತ್ತು.







