ಡಿ.11ಕ್ಕೆ ವೈದ್ಯರ ಪ್ರತಿಭಟನೆ: ಒಪಿಡಿ ಸೇವೆ ಸ್ಥಗಿತ

ಮಂಗಳೂರು, ಡಿ.10: ಕೇಂದ್ರ ಸರಕಾರವು ಆಯುರ್ವೇದ ವೈದ್ಯರು ಅಲೋಪಥಿಯ ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿಸಿದ ಮಿಕ್ಸೊಪಥಿಯನ್ನು ಖಂಡಿಸಿ ಡಿ.11ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಹೊರರೋಗಿ ವಿಭಾಗದ (ಒಪಿಡಿ) ಸೇವೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ.
ಕೇಂದ್ರದ ಆದೇಶವನ್ನು ಖಂಡಿಸಿ ಒಪಿಡಿ ಸೇವೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗುತ್ತಿದೆ. ಮಂಗಳೂರು ವ್ಯಾಪ್ತಿಯಲ್ಲಿನ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸುಮಾರು ಆರು ಸಾವಿರ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಒಂದೂವರೆ ಸಾವಿರಕ್ಕೂ ಹೆಚ್ಚು ವೈದ್ಯರು ಸಂಘದಲ್ಲಿ ಸಕ್ರಿಯರಿದ್ದಾರೆ. ನಗರದ ವೆನ್ಲಾಕ್ ಸಮೀಪದ ಸಂಘದ ಕಚೇರಿ ಮುಂಭಾಗ ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಘಟಕದ ಅಧ್ಯಕ್ಷ ಡಾ.ಎಂ.ಎ.ಆರ್ ಕುಡುವ ಮಾಹಿತಿ ನೀಡಿದರು.
ಕೇಂದ್ರ ಸರಕಾರವು ವೈದ್ಯಕೀಯ ಪದ್ಧತಿಯಲ್ಲಿ ಅವೈಜ್ಞಾನಿಕ ಕ್ರಮಗಳನ್ನು ಕೈಗೊಂಡರೆ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂಬ ಸಂದೇಶವನ್ನು ಪ್ರತಿಭಟನೆ ಮೂಲಕ ಎಚ್ಚರಿಕೆ ರವಾನಿಸಲಾಗುವುದು ಎಂದು ಹೇಳಿದರು.
ಈ ಕುರಿತು ‘ವಾರ್ತಾಭಾರತಿ’ ಜೊತೆ ಮಾತನಾಡಿದ ಐಎಂಎ ರಾಜ್ಯ ಸಮಿತಿ ಸದಸ್ಯ ಡಾ.ಅಣ್ಣಯ್ಯ ಕುಲಾಲ್, ಐಎಂಎ ಅಡಿಯಲ್ಲಿ ರಾಜ್ಯದಲ್ಲಿ 174 ಘಟಕಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಮೂಲ್ಕಿ, ಸುರತ್ಕಲ್, ಬೆಳ್ತಂಗಡಿ, ಸುಳ್ಯ, ಬಂಟ್ವಾಳಗಳಲ್ಲೂ ಪ್ರತ್ಯೇಕ ಘಟಕ ಗಳಿವೆ. ಎಲ್ಲೆಡೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದರು.
ಸರಕಾರಿ ವೈದ್ಯರು ಸೇವೆಗೆ ಲಭ್ಯ: ಡಿಎಚ್‌ಒ
ಖಾಸಗಿ ಅಲೋಪಥಿ ವೈದ್ಯರು ಶುಕ್ರವಾರ ಹೊರ ರೋಗಿ ವಿಭಾಗವನ್ನು ಬಂದ್ ಮಾಡಿ ಪ್ರತಿಭಟಿಸಲಿರುವ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಡ್ಡಾಯ ಕರ್ತವ್ಯದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಪ್ರತಿಭಟನೆಯ ಕಾರಣ ಜಿಲ್ಲೆಯ ಯಾವುದೇ ರೋಗಿಯು ಸಮಸ್ಯೆಗೆ ಸಿಲುಕಬಾರದು. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೈದ್ಯರ ಬೇಡಿಕೆಗಳ ಕುರಿತು ಸರಕಾರ ಸ್ಪಂದಿಸಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.







