ಐಟಿ-ಬಿಟಿ ಕಂಪೆನಿಗಳಿಗೆ ಕಚೇರಿಗಳಲ್ಲಿ ಕೆಲಸ ಮಾಡಿ ಎಂದು ನಿರ್ದೇಶನ ನೀಡಲು ಆಗದು: ಡಿಸಿಎಂ ಡಾ. ಅಶ್ವತ್ಥ ನಾರಾಯಣ

ಬೆಂಗಳೂರು, ಡಿ. 10: ರಾಜ್ಯದಲ್ಲಿರುವ ಐಟಿ-ಬಿಟಿ ಕಂಪೆನಿಗಳನ್ನು ವರ್ಕ್ ಫ್ರಮ್ ಹೋಂ ವ್ಯವಸ್ಥೆ ಕೈಬಿಟ್ಟು ಕಚೇರಿಗೆ ಬಂದು ಕೆಲಸ ಮಾಡಿ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಂದಿನ ದಿನಗಳಲ್ಲಿ ಐಟಿ-ಬಿಟಿ ಕಂಪೆನಿಗಳ ಸಿಬ್ಬಂದಿ ಕಚೇರಿಯಿಂದ ಕೆಲಸ ಮಾಡಲಿದ್ದಾರೆ. ಇದೀಗ ಕೋವಿಡ್ ಪರಿಸ್ಥಿತಿ ಇದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದರು.
ಕೋವಿಡ್-19 ಸಂಕಷ್ಟದ ಮಧ್ಯೆ ಬೆಂಗಳೂರು ಟೆಕ್ ಸಮ್ಮಿಟ್ 2020 ವರ್ಚುವೆಲ್ ಸಮಾವೇಶದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಆದರೆ, ಕೆಲ ಕಂಪೆನಿಗಳೊಂದಿಗೆ ಒಡಂಬಡಿಕೆ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವರ್ಚುಯಲ್ ಟೆಕ್ ಸಮ್ಮಿಟ್‍ನಲ್ಲಿ ಸುಮಾರು 3,099 ಸಂಸ್ಥೆಗಳು ಮತ್ತು ಕಂಪೆನಿಗಳು ಪಾಲ್ಗೊಂಡಿದ್ದವು. ನವೋದ್ಯಮ, ಕೌಶಲ್ಯಾಭಿವೃದ್ಧಿ ಹಾಗೂ ಬಾಹ್ಯಕಾಶ, ರಕ್ಷಣೆ, ಶಿಕ್ಷಣ, ಕ್ರೀಡೆ, ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಎಂಟು ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ರಘುಪತಿ ಭಟ್, ಐಟಿ-ಬಿಟಿ ಸಿಬ್ಬಂದಿ ಕಚೇರಿಗಳಲ್ಲಿ ಬಂದು ಕೆಲಸ ಮಾಡಲು ಆರಂಭಿಸಿದರೆ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಹೊಟೇಲ್ ಸೇರಿದಂತೆ ಇನ್ನಿತರ ಉದ್ಯಮಗಳು ಚೇತರಿಸಿಕೊಳ್ಳಲಿವೆ. ಆದುದರಿಂದ ವರ್ಕ್ ಫ್ರಮ್ ಹೋಂ ಬದಲಿಗೆ ಕಚೇರಿಯಿಂದಲೇ ಕಾರ್ಯಚಟುವಟಿಕೆ ಆರಂಭಿಸಬೇಕು ಎಂದು ಕೋರಿದರು.







