ಮಲಹೊರುವ ಪದ್ಧತಿ ಅತ್ಯಂತ ಅಮಾನವೀಯ: ಕರ್ನಾಟಕ ಹೈಕೋರ್ಟ್
ಮ್ಯಾನ್ಯುವಲ್ ಸ್ಕಾವೆಂಜರ್ಸ್ ಕಾಯ್ದೆ 2013ರ ಜಾರಿಗೆ ನಿರ್ದೇಶ

ಬೆಂಗಳೂರು,ಡಿ.10: ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಥವಾ ಕೈಗಳಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಮತ್ತು ಮಲ ಹೊರುವ ಅನಿಷ್ಟ ಪದ್ಧತಿಯನ್ನು ‘ಅತ್ಯಂತ ಅಮಾನವೀಯ ’ಎಂದು ಬಣ್ಣಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯವು ‘ಮ್ಯಾನ್ಯುವಲ್ ಸ್ಕಾವೆಂಜರ್‌ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ,2013 (ಮ್ಯಾನ್ಯುವಲ್ ಸ್ಕಾವೆಂಜರ್ಸ್ ಕಾಯ್ದೆ) ’ರ ಸೂಕ್ತ ಅನುಷ್ಠಾನಕ್ಕಾಗಿ ಹಲವಾರು ನಿರ್ದೇಶಗಳನ್ನು ಹೊರಡಿಸಿದೆ.
ನಿರ್ದೇಶಗಳನ್ನು ಹೊರಡಿಸುವ ಮುನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾ.ವಿಶ್ವಜಿತ ಶೆಟ್ಟಿ ಅವರ ಪೀಠವು,ಭಾರತೀಯ ಸಂವಿಧಾನವು ಮ್ಯಾನ್ಯುವಲ್ ಸ್ಕಾವೆಂಜಿಂಗ್‌ಗೆ ಯಾವುದೇ ರೂಪದಲ್ಲಿಯೂ ಅನುಮತಿಸುವುದಿಲ್ಲ ಎಂದು ಅಭಿಪ್ರಾಯಿಸಿತು.
ನಮ್ಮ ಸಂವಿಧಾನವು ಯಾವುದೇ ರೂಪದಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್‌ಗೆ ಅನುಮತಿ ನೀಡುವುದಿಲ್ಲ ಎನ್ನುವುದರಲ್ಲಿ ಯಾವುದೇ ವಿವಾದವಿಲ್ಲ. ಪ್ರಜೆಗಳ ಘನತೆಯಿಂದ ಬದುಕುವ ಹಕ್ಕು ಸಂವಿಧಾನದ ವಿಧಿ 21ರಡಿ ಖಾತರಿ ಪಡಿಸಲಾಗಿರುವ ಮೂಲಭೂತ ಹಕ್ಕುಗಳ ಅವಿಭಾಜ್ಯ ಅಂಗವಾಗಿದೆ. ಸಂವಿಧಾನವು ವ್ಯಕ್ತಿಯ ಘನತೆಯನ್ನು ರಕ್ಷಿಸಲು ಬಯಸಿದೆ ಎನ್ನುವುದನ್ನು ಅದರ ಪೀಠಿಕೆಯಲ್ಲಿಯೇ ಹೇಳಲಾಗಿದೆ. ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅತ್ಯಂತ ಅಮಾನವೀಯವಾಗಿದೆ ಮತ್ತು ಅದು ಸಂವಿಧಾನದ ವಿಧಿ 21ರಡಿ ಖಾತರಿ ಪಡಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕ ಉಚ್ಚ ನ್ಯಾಯಾಲಯ
ಕೈಗಳಿಂದ ಶೌಚಗುಂಡಿಯನ್ನು ಸ್ವಚ್ಛಗೊಳಿಸುವಂತೆ ಯಾವುದೇ ವ್ಯಕ್ತಿಯನ್ನು ಬಲವಂತಗೊಳಿಸಿದರೆ ಅದು ಸಂವಿಧಾನದ ವಿಧಿ 21ರಡಿ ನೀಡಲಾಗಿರುವ ಆತನ/ಆಕೆಯ ಮೂಲಭೂತ ಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗುತ್ತದೆ ಎಂದೂ ನ್ಯಾಯಾಲಯವು ಎತ್ತಿ ಹಿಡಿಯಿತು. ಮ್ಯಾನ್ಯುವಲ್ ಸ್ಕಾವೆಂಜರ್ಸ್ ಕಾಯ್ದೆಯ ಸೂಕ್ತ ಅನುಷ್ಠಾನಕ್ಕಾಗಿ ರಾಜ್ಯ ಸರಕಾರಕ್ಕೆ ಹಲವಾರು ನಿರ್ದೇಶಗಳನ್ನು ಹೊರಡಿಸಿದ ಮು.ನ್ಯಾ.ಓಕಾ ನೇತೃತ್ವದ ಪೀಠವು,ನ್ಯಾಯಾಲಯದ ನಿರ್ದೇಶಗಳನ್ನು ಪಾಲಿಸಲು ಮತ್ತು ಕಾಯ್ದೆಯ ಅನುಷ್ಠಾನಕ್ಕಾಗಿ ಪಾಲುದಾರರಿಗೆ ನೆರವಾಗಲು ಅವರ ಸಭೆಗಳನ್ನು ಕರೆಯುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಗೂ ನಿರ್ದೇಶವನ್ನು ನೀಡಿತು.
ಸಂವಿಧಾನದ ವಿಧಿ 47ರಡಿ,ತನ್ನ ಪ್ರಜೆಗಳ ಜೀವನಮಟ್ಟವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಬದ್ಧತೆಯನ್ನು ರಾಜ್ಯ ಸರಕಾರವು ಹೊಂದಿದೆ ಎನ್ನುವುದನ್ನು ಉಚ್ಚ ನ್ಯಾಯಾಲಯವು ನೆನಪಿಸಿತು.
ಹಳೆಯ ಕಾಯ್ದೆ (ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ನೇಮಕಾತಿ ಮತ್ತು ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯ್ದೆ 1993) ಮತ್ತು 2013ರ ಕಾಯ್ದೆಯ ನಡುವಿನ ಪ್ರಮುಖ ವ್ಯತ್ಯಾಸಗಳನ್ನೂ ತೀರ್ಪು ಪ್ರಮುಖವಾಗಿ ಬಿಂಬಿಸಿದೆ. ‘ಮ್ಯಾನ್ಯುವಲ್ ಸ್ಕಾವೆಂಜರ್ ’ನ ವ್ಯಾಖ್ಯೆಯು ಹಳೆಯ ಕಾಯ್ದೆಗಿಂತ 2013ರ ಕಾಯ್ದೆಯಲ್ಲಿ ಹೆಚ್ಚು ವಿಶಾಲವಾಗಿದೆ ಎಂದು ಅದು ಹೇಳಿದೆ.
ಕರ್ನಾಟಕದಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಕಾಯ್ದೆಯು ಜಾರಿಯಾಗದಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಇದು ನಿರಂತರ ನಿಗಾ ಅಗತ್ಯವಾಗಿರುವ ಮತ್ತು ನಿರಂತರ ಆಜ್ಞಾಪತ್ರಗಳನ್ನು ಹೊರಡಿಸುವ ಅಧಿಕಾರದ ಬಳಕೆಯಾಗಬೇಕಿರುವ ಪ್ರಕರಣವಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ
ರಾಜ್ಯದಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಉಚ್ಚ ನ್ಯಾಯಾಲಯವು ನವೆಂಬರ್‌ನಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಪಾಲನಾ ಅಫಿಡ್ವಿಟ್‌ಗಳನ್ನು 2021,ಜ.30ರೊಳಗೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2021,ಫೆ.2ಕ್ಕೆ ನಿಗದಿಗೊಳಿಸಿದೆ.
ರಾಜ್ಯ ಸರಕಾರಕ್ಕೆ ಹೈಕೋರ್ಟ್‌ನ ಪ್ರಮುಖ ನಿರ್ದೇಶಗಳು
* ಮ್ಯಾನ್ಯುವಲ್ ಸ್ಕಾವೆಂಜರ್ಸ್ ಕಾಯ್ದೆಯಡಿ ದಂಡನೀಯ ಅಪರಾಧಗಳಿಗಾಗಿ ದಾಖಲಾಗಿರುವ ಎಫ್‌ಐಆರ್‌ಗಳ ಸಂಖ್ಯೆ ಕುರಿತು ವಿವರಗಳು,ಎಫ್‌ಐಆರ್ ಸಲ್ಲಿಕೆಯಾಗಿರುವ ಪ್ರಕರಣಗಳ ವಿವರಗಳು,ಬಾಕಿಯಿರುವ ಪ್ರಕರಣಗಳು ಮತ್ತು ದೋಷನಿರ್ಣಯಗೊಂಡಿರುವ ಹಾಗೂ ಆರೋಪಿಗಳು ಖುಲಾಸೆಗೊಂಡಿರುವ ಪ್ರಕರಣಗಳ ವಿವರಗಳನ್ನು ದಾಖಲೆಗಳ ರೂಪದಲ್ಲಿ ಕಾಯ್ದಿರಿಸಬೇಕು.
* ಮ್ಯಾನ್ಯುವಲ್ ಸ್ಕಾವೆಂಜರ್ಸ್ ನಿಯಮಾವಳಿಗಳು ಸೂಚಿಸಿರುವಂತೆ ಜಿಲ್ಲಾಮಟ್ಟದ ಸಮೀಕ್ಷಾ ಸಮಿತಿಗಳನ್ನು ರಚಿಸಲಾಗಿದೆ ಎನ್ನುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಈ ಸಮಿತಿಗಳು ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ಸಮೀಕ್ಷೆಯನ್ನು ನಡೆಸಿವೆಯೇ ಮತ್ತು ಆಯಾ ಜಿಲ್ಲೆಗಳಲ್ಲಿ ಸಮಿತಿಗಳು ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕು.
* ರಾಜ್ಯಮಟ್ಟದ ಸಮೀಕ್ಷಾ ಸಮಿತಿಯ ರಚನೆಗೆ ಸಂಬಂಧಿಸಿದ ಮತ್ತು ಸಮಿತಿಯ ಸಭೆಗಳ ಸಂಖ್ಯೆಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲೀಕರಿಸಬೇಕು.
* ಮ್ಯಾನ್ಯುವಲ್ ಸ್ಕಾವೆಂಜರ್ಸ್ ಕಾಯ್ದೆಯನ್ನು ಜಾರಿಗೊಳಿಸುವಂತೆ ಎಲ್ಲ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಗಳನ್ನು ಹೊರಡಿಸಬೇಕು.
* ಬಯಲು ಶೌಚ ಪದ್ಧತಿಯನ್ನು ನಿರ್ಮೂಲಿಸಲು ಬೃಹತ್ ಪ್ರಮಾಣದಲ್ಲಿ ಜಾಗ್ರತಿ ಅಭಿಯಾನವನ್ನು ಹಮ್ಮಿಕೊಳ್ಳಬೇಕು.







