ದಾಂಧಲೆಯ ವೇಳೆ ಸಾವಿರಾರು ಐಫೋನ್ ಲೂಟಿ, 437 ಕೋಟಿ ರೂ. ನಷ್ಟ: ಕೋಲಾರದ ವಿಸ್ಟ್ರಾನ್ ಕಂಪೆನಿ ಆರೋಪ
ಪೊಲೀಸರಿಗೆ ದೂರು

ಬೆಂಗಳೂರು: ಐಫೋನ್ ತಯಾರಿಕಾ ಕಂಪೆನಿ ವಿಸ್ಟ್ರಾನ್‍ನ ಕೋಲಾರ ಘಟಕದಲ್ಲಿ ಶನಿವಾರ ಉದ್ಯೋಗಿಗಳು ನಡೆಸಿದ ದಾಂಧಲೆಯಿಂದ ಅಂದಾಜು ರೂ. 437 ಕೋಟಿ ನಷ್ಟ ಸಂಭವಿಸಿದೆ ಎಂದು ಕಂಪೆನಿ ಪೊಲೀಸರಿಗೆ ಹಾಗೂ ಕಾರ್ಮಿಕ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದೆ.
ಹಿಂಸಾಚಾರದ ವೇಳೆ ಸಾವಿರಾರು ಐಫೋನ್‍ಗಳನ್ನು ಲೂಟಿ ಮಾಡಲಾಗಿದೆ ಹಾಗೂ ಕಂಪೆನಿಯ ಹಲವಾರು ಉಪಕರಣಗಳಿಗೆ ಹಾನಿಯೆಸಗಲಾಗಿದೆ ಎಂದು ದೂರಲಾಗಿದೆ. ಕಂಪೆನಿಗೆ ಉಂಟು ಮಾಡಿರುವ ಈ ರೀತಿಯ ಹಾನಿ ಸ್ವೀಕಾರಾರ್ಹವಲ್ಲ ಎಂದು ಕರ್ನಾಟಕ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಕಂಪೆನಿಯಲ್ಲಿ ಸುಮಾರು 1200 ಖಾಯಂ ಉದ್ಯೋಗಿಗಳಿದ್ದಾರೆ.
ಕಂಪೆನಿಯ ಆಡಳಿತ, ಗುತ್ತಿಗೆದಾರರು ಹಾಗೂ ಉದ್ಯೋಗಿಗಳ ನಡುವಿನ ಸಂವಹನದ ಕೊರತೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
"ಕಂಪೆನಿಯು ಕಾರ್ಮಿಕರನ್ನು ನೇಮಕಾತಿ ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸಿದ್ದರೂ ಅವರು ಉದ್ಯೋಗಿಗಳಿಗೆ ವೇತನ ನೀಡಲು ವಿಳಂಬಿಸಿದ್ದಾರೆಂಬ ಮಾಹಿತಿಯಿದೆ, ಈ ಕುರಿತು ಪರಿಶೀಲಿಸಲಾಗುತ್ತಿದೆ,'' ಎಂದು ಸಚಿವರು ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಇರುವ ಬಾಕಿ ಮೂರು ದಿನಗಳೊಳಗೆ ಪಾವತಿಸುವಂತೆ ಕಂಪೆನಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವ ಹೆಬ್ಬಾರ್ ಹೇಳಿದ್ದಾರೆ.







