ಸಿಖ್ಖರೊಂದಿಗೆ ಪ್ರಧಾನಿಯ ವಿಶೇಷ ಸಂಬಂಧ ಕುರಿತು 2 ಕೋಟಿ ಇಮೇಲ್ ಕಳುಹಿಸಿದ ಐ ಆರ್ ಸಿ ಟಿ ಸಿ

ಹೊಸದಿಲ್ಲಿ,ಡಿ.14: ಕೇಂದ್ರ ಸರಕಾರದ ನೂತನ ಕೃಷಿಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಕೃಷಿ ಮಸೂದೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ 13 ನಿರ್ಧಾರಗಳ ಬೆಂಬಲಿಸಿ ಐಆರ್’ಸಿಟಿಸಿ (ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ) ಯು ತನ್ನ ಗ್ರಾಹಕರಿಗೆ 2 ಕೋಟಿಗೂ ಹೆಚ್ಚು ಇಮೇಲ್ ಗಳನ್ನು ಕಳುಹಿಸಿದೆ ಎಂದು ವರದಿಯಾಗಿದೆ. ಅದರಲ್ಲೂ ಪ್ರಮುಖವಾಗಿ ಸಿಖ್ ಸಮುದಾಯಕ್ಕೆ ಸೇರಿದವರಿಗೆ ಇಮೇಲ್ ಮಾಡಲಾಗಿದೆ ಎನ್ನಲಾಗಿದೆ.
ಐಆರ್’ಸಿಟಿಸಿಯು ಭಾರತೀಯ ರೈಲ್ವೆ ಇಲಾಖೆಯ ಅಂಗಸಂಸ್ಥೆಯಾಗಿದ್ದು, ರೈಲ್ವೆಯ ಕ್ಯಾಟೆರಿಂಗ್, ಪ್ರವಾಸೋದ್ಯಮ ಮತ್ತು ಆನ್ ಲೈನ್ ಟಿಕೆಟ್ ಬುಕಿಂಗ್ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ.
ಅಧಿಕಾರಿಗಳ ಪ್ರಕಾರ, “ಸಿಖ್ಖರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿಶೇಷ ಸಂಬಂಧ” ಎಂಬ 47 ಪುಟಗಳ ಕೈಪಿಡಿಯನ್ನು 2 ಕೋಟಿಗೂ ಹೆಚ್ಚು ಮಂದಿಗೆ ಇಮೇಲ್ ಮಾಡಲಾಗಿದೆ. ಇದು ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಯ ಕುರಿತಾದಂತೆ ಇರುವ ವದಂತಿಗಳ ಕುರಿತು ‘ಜಾಗೃತಿ’ ಮೂಡಿಸುತ್ತದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಆರ್’ಸಿಟಿಸಿಯ ಅಧಿಕೃತರು, “ಈ ಇಮೇಲ್ ಅನ್ನು ಐಆರ್’ಸಿಟಿಸಿಯ ಎಲ್ಲಾ ಡಾಟಾಬೇಸ್ ಗಳಿಗೂ ಕಳುಹಿಸಲಾಗಿದೆ. ಕೇವಲ ಸಿಖ್ ಸಮುದಾಯದ ಜನರಿಗೆ ಮಾತ್ರ ಕಳುಹಿಸಲಾಗಿದೆ ಎನ್ನುವುದು ಸುಳ್ಳು. ಇದು ಮೊದಲ ಬಾರಿ ಏನಲ್ಲ. ಈ ಹಿಂದೆಯೂ ಕೂಡಾ ಸರಕಾರದ ಉತ್ತಮ ಯೋಜನೆಗಳ ಕುರಿತಾದಂತೆ ನಾವು ಜನರಿಗೆ ಮಾಹಿತಿ ನೀಡಿದ್ದೇವೆ. ಹಾಗೆಯೇ ಸಾರ್ವಜನಿಕರ ಹಿತಕ್ಕಾಗಿ ಈ ಇಮೇಲ್ ಕೂಡಾ ಕಳುಹಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.







