‘ಕೇರಳದ ಪ್ರತಿಯೊಬ್ಬರಿಗೂ ಕೊರೋನ ಲಸಿಕೆ’ ಎಂದಿದ್ದ ಪಿಣರಾಯಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ!

ತಿರುವನಂತಪುರಂ,ಡಿ.14: ಕೇರಳದ ಪ್ರತಿಯೊಬ್ಬ ನಾಗರಿಕನಿಗೂ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕೇರಳ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಪಕ್ಷವು ದೂರು ನೀಡಿದೆ ಎಂದು Times of India ವರದಿ ಮಾಡಿದೆ.
“ಕೇರಳದಲ್ಲಿ ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಕೊನೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ಘೋಷಣೆಯನ್ನು ಹೊರಡಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ” ಎಂದು ಬಿಜೆಪಿ ತಾನು ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.
ದ್ವಿಮುಖ ಧೋರಣೆ?
ಈ ಹಿಂದೆ ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ “ಬಿಹಾರದ ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆಯನ್ನುನೀಡಲಾಗುವುದು. ಇದು ನಮ್ಮ ಪ್ರಣಾಳಿಕೆಯ ಮೊದಲ ಅಂಶವಾಗಿದೆ” ಎಂದು ಹೇಳಿಕೆ ನೀಡಿದ್ದರು. ಈ ವೇಳೆ ನಿರ್ಮಲಾ ಸೀತಾರಾಮ್ ಹೇಳಿಕೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗವು ನಿರ್ಮಲಾ ಹೇಳಿಕೆಗೆ ಕ್ಲೀನ್ ಚಿಟ್ ನೀಡಿತ್ತು. ಸದ್ಯ ಕೇರಳದಲ್ಲಿ ಬಿಜೆಪಿ ಪಕ್ಷವು ಮುಖ್ಯಮಂತ್ರಿ ಹೇಳಿಕೆಯನ್ನು ವಿರೋಧಿಸಿ ಪ್ರಕರಣ ದಾಖಲಿಸಿದ್ದು ದ್ವಿಮುಖ ಧೋರಣೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







