ವಿಧಾನ ಪರಿಷತ್ ವಿಶೇಷ ಅಧಿವೇಶನ: ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

ಬೆಂಗಳೂರು, ಡಿ. 14: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿಲುವಳಿ ಸೂಚನೆ ಹಾಗೂ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಕಾರ್ಯತಂತ್ರ ರೂಪಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾಳೆ(ಡಿ.15) ಬೆಳಗ್ಗೆ 10:30ಕ್ಕೆ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರ ಸಭೆ ಕರೆದಿದ್ದಾರೆ.
ಮೇಲ್ಮನೆ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಕಡ್ಡಾಯವಾಗಿ ಅಧಿವೇಶನ ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಎಲ್ಲ ಸದಸ್ಯರಿಗೆ ಈಗಾಗಲೇ 'ವಿಪ್' ಜಾರಿ ಮಾಡಲಾಗಿದೆ. ಇದೇ ವೇಳೆ ನಾಳೆ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ.
ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಪರಿಷತ್ತಿನ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಜೆಡಿಎಸ್ ಬೆಂಬಲ ಕೋರಿಕೆ ಸಾಧ್ಯತೆ: ಸಭಾಪತಿ ಮುಂದುವರಿಕೆ ಸಂಬಂಧ ಕಾಂಗ್ರೆಸ್, ಜೆಡಿಎಸ್‍ನ ಪರಿಷತ್ತಿನ ಮುಖಂಡರ ಬೆಂಬಲ ಕೋರುವ ಸಾಧ್ಯತೆಗಳಿವೆ. ಆದರೆ, ಜೆಡಿಎಸ್‍ನವರು ಕಾಂಗ್ರೆಸ್‍ಗೆ ಬೆಂಬಲ ನೀಡುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಪರಿಷತ್ತಿನಲ್ಲಿ 'ಗೋಹತ್ಯೆ ನಿಷೇಧ ಮಸೂದೆ' ಮಂಡನೆಗೆ ಜೆಡಿಎಸ್ ತೀರ್ಮಾನವೂ ನಾಳೆಯೇ ಗೊತ್ತಾಗಲಿದೆ.
‘ವಿಧಾನ ಪರಿಷತ್‍ನ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ನಾಳೆ(ಡಿ.15) ಮತ್ತೆ ವಿಶೇಷ ಅಧಿವೇಶನ ಕರೆಯಲಾಗಿದೆ. ಪರಿಷತ್ ನಿಯಮ 165ರ ಅಡಿಯಲ್ಲಿ ಸಭಾಪತಿ ಪಕ್ಷಪಾತ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಪ್ರಸ್ತಾಪ ಸಲ್ಲಿಸಿದ್ದರು. ಆದರೆ, ಸಭಾಪತಿ ಇದನ್ನು ತಿರಸ್ಕರಿಸಿದ್ದಾರೆ. ಇದನ್ನು ಹಿಂಬರಹದಲ್ಲಿ ಸದಸ್ಯರಿಗೆ ತಿಳಿಸಲು ನಮೂದಿಸಿದ್ದಾರೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಕಾಂಗ್ರೆಸ್‍ಗೆ ಬೆಂಬಲಿಸುವಂತೆ ಜೆಡಿಎಸ್‍ಗೆ ನಾವು ಮನವಿ ಮಾಡಿಲ್ಲ. ಈ ಬಗ್ಗೆ ಪಕ್ಷದ ವರಿಷ್ಟರು ತೀರ್ಮಾನ ಮಾಡಲಿದ್ದಾರೆ. ಆದರೆ, ಜೆಡಿಎಸ್ ನಮಗೆ ಬೆಂಬಲ ನೀಡುವ ನಿರೀಕ್ಷೆ ಇದೆ.
-ಎಸ್.ಆರ್.ಪಾಟೀಲ್, ಪರಿಷತ್ ವಿಪಕ್ಷ ನಾಯಕ







