15 ದಿನಗಳ ಕಠಿಣ ಯುದ್ಧಕ್ಕೆ ಅಗತ್ಯ ಶಸ್ತ್ರಾಸ್ತ್ರಗಳ ದಾಸ್ತಾನು: ಸಶಸ್ತ್ರ ಪಡೆಗಳಿಗೆ ಕೇಂದ್ರದ ಅನುಮತಿ

ಹೊಸದಿಲ್ಲಿ,ಡಿ.14: ಚೀನಾದೊಂದಿಗೆ ಗಡಿ ಸಂಘರ್ಷದ ನಡುವೆಯೇ 15 ದಿನಗಳ ಕಠಿಣ ಯುದ್ಧಕ್ಕಾಗಿ ತಮ್ಮ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ದಾಸ್ತಾನನ್ನು ಹೆಚ್ಚಿಸಿಕೊಳ್ಳಲು ಸಶಸ್ತ್ರ ಪಡೆಗಳಿಗೆ ಅಧಿಕಾರವನ್ನು ನೀಡುವ ಮೂಲಕ ಭಾರತವು ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ.
ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳು ವಿಸ್ತ್ರತ ದಾಸ್ತಾನು ಅಗತ್ಯಗಳು ಮತ್ತು ತುರ್ತು ಹಣಕಾಸು ಅಧಿಕಾರಗಳನ್ನು ಬಳಸಿಕೊಂಡು ಸ್ಥಳೀಯ ಮತ್ತು ವಿದೇಶಿ ಮೂಲಗಳಿಂದ ರಕ್ಷಣಾ ಉಪಕರಣಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು 50,000 ಕೋ.ರೂ.ಅಧಿಕ ವೆಚ್ಚ ಮಾಡುವ ನಿರೀಕ್ಷೆಯಿದೆ.
ಈ ಹಿಂದಿನ 10 ದಿನಗಳ ಬದಲು 15 ದಿನಗಳ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ದಾಸ್ತಾನಿಟ್ಟುಕೊಳ್ಳಲು ಸರಕಾರವು ಅನುಮತಿಯನ್ನು ನೀಡಿರುವ ಹಿಂದೆ ಚೀನಾ ಮತ್ತು ಪಾಕಿಸ್ತಾನಗಳ ವಿರುದ್ಧ ಎರಡೂ ರಂಗಗಳಲ್ಲಿ ಯುದ್ಧಕ್ಕೆ ರಕ್ಷಣಾ ಪಡೆಗಳನ್ನು ಸನ್ನದ್ಧಗೊಳಿಸುವ ಉದ್ದೇಶವಿದೆ. ದಾಸ್ತಾನು ಹೆಚ್ಚಿಸುವ ಪ್ರಸ್ತಾವಕ್ಕೆ ಕೆಲವು ಸಮಯದ ಹಿಂದೆ ಅನುಮತಿ ನೀಡಲಾಗಿದೆ ಎಂದು ಸರಕಾರಿ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.
ಹಲವು ವರ್ಷಗಳ ಹಿಂದೆ ಸಶಸ್ತ್ರ ಪಡೆಗಳು 40 ದಿನಗಳ ಕಠಿಣ ಯುದ್ಧಕ್ಕೆ ಅಗತ್ಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ದಾಸ್ತಾನಿಟ್ಟುಕೊಳ್ಳುವ ಅಧಿಕಾರವನ್ನು ಹೊಂದಿದ್ದವು. ಆದರೆ ಯುದ್ಧೋಪಕರಣಗಳ ದಾಸ್ತಾನು ಸಮಸ್ಯೆ ಮತ್ತು ಬದಲಾಗುತ್ತಿರುವ ಯುದ್ಧ ಸ್ವರೂಪಗಳ ಹಿನ್ನೆಲೆಯಲ್ಲಿ ಈ ಅವಧಿಯನ್ನು 10 ದಿನಗಳಿಗೆ ಇಳಿಸಲಾಗಿತ್ತು.
ಉರಿ ದಾಳಿಯ ಬಳಿಕ ಯುದ್ಧ ಸಾಮಗ್ರಿಗಳ ಸಂಗ್ರಹ ಕಡಿಮೆ ಪ್ರಮಾಣದಲ್ಲಿದೆ ಎನ್ನುವುದು ಸರಕಾರಕ್ಕೆ ಮನವರಿಕೆಯಾಗಿತ್ತು ಮತ್ತು ಆಗಿನ ಮನೋಹರ್ ಪಾರಿಕ್ಕರ್ ನೇತೃತ್ವದ ರಕ್ಷಣಾ ಸಚಿವಾಲಯವು ಸೇನೆ,ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರ ಹಣಕಾಸು ಅಧಿಕಾರವನ್ನು 100 ಕೋ.ರೂ.ಗಳಿಂದ 500 ಕೋ.ರೂ.ಗಳಿಗೆ ಹೆಚ್ಚಿಸಿತ್ತು. ಯುದ್ಧಗಳಲ್ಲಿ ಬಳಸಬಹುದಾದ ಯಾವುದೇ ಉಪಕರಣವನ್ನು ಖರೀದಿಸಲು ಹೆಚ್ಚುವರಿಯಾಗಿ 300 ಕೋ.ರೂ.ಗಳ ತುರ್ತು ಹಣಕಾಸು ಅಧಿಕಾರವನ್ನೂ ಈ ಪಡೆಗಳಿಗೆ ನೀಡಲಾಗಿತ್ತು.
ಎರಡು ರಂಗಗಳಲ್ಲಿ ವೈರಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು,ಕ್ಷಿಪಣಿಗಳು,ಬಿಡಿಭಾಗಗಳು ಮತ್ತು ಇತರ ರಕ್ಷಣಾ ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಸಶಸ್ತ್ರ ಪಡೆಗಳು ತೊಡಗಿಕೊಂಡಿವೆ.







