ಕುಂದಾಪುರ ಕಥೊಲಿಕ್ ಸಭಾದಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮ

ಕುಂದಾಪುರ, ಡಿ.14: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ. ಧರ್ಮ ಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವ ರೊಂದಿಗೆ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮವನ್ನು ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾ ಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ನೊರೋನ್ಹಾ ಮಾತನಾಡಿ, ಯೇಸು ಸ್ವಾಮಿ ತಮ್ಮ ಭೋದನೆಯಿಂದ ಮಾತ್ರವಲ್ಲ ಬದಲಾಗಿ ತಮ್ಮ ಕೃತಿಯಿಂದ ಕೂಡ ಶಾಂತಿಯ ಸಂದೇಶವನ್ನು ಜಗತ್ತಿಗೆ ಪಸರಿಸಿದರು. ಅದೇ ಸಂದೇಶವನ್ನು ತಮ್ಮ ಅನುಯಾಯಿಗಳಿಗೂ ನೀಡಿದ ಮಹಾನ್ ಪುರುಷ ಯೇಸು ಸ್ವಾಮಿ. ಯೇಸುವಿನ ಅನು ಯಾಯಿಗಳಾದ ಪ್ರತಿಯೊಬ್ಬ ಕ್ರೈಸ್ತರು ಕೂಡ ಕ್ಷಮೆ, ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕಾಗಿದೆ ಎಂದರು.
ಉಡುಪಿ ಸಿಎಸ್‌ಐ ಸಭೆಯ ಮಾಜಿ ವಲಯಾಧ್ಯಕ್ಷ ವಂ.ಸ್ಟೀವನ್ ಸರ್ವೋತ್ತಮ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಯಪ್ರಕಾಶ್ ಶೆಟ್ಟಿ, ಬಸ್ರೂರು ಸರಕಾರಿ ಉರ್ದು ಶಾಲೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಕ್ರಿಸ್ಮಸ್ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ವಲಯ ವ್ಯಾಪ್ತಿಯ 7 ಕುಟುಂಬಗಳಿಗೆ ವೈದ್ಯಕೀಯ ಹಾಗೂ ಮನೆ ಕಟ್ಟಲು ನೆರವನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷೆ ಮೇಬಲ್ ಡಿಸೋಜ ವಹಿಸಿದ್ದರು.
ಕೃಪಾ ಚರ್ಚ್ ಕುಂದಾಪುರ ಇದರ ಉಸ್ತುವಾರಿಗಳಾದ ಜೊಯೆಲ್ ಸುಹಾಸ್, ಕೆಥೊಲಿಕ್ ಸಭಾ ಕುಂದಾಪುರ ವಲಯ ಕಾರ್ಯದರ್ಶಿ ಮೆಲ್ವಿನ್ ಫುರ್ಟಾಡೊ, ಕಾರ್ಯಕ್ರಮ ಸಂಚಾಲಕ ಪ್ರೀತಮ್ ಡಿಸೋಜ, ಸಹ ಸಂಚಾಲಕ ಜೀವನ್ ಸಾಲಿನ್ಸ್, ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಹೆರಿಕ್ ಗೊನ್ಸಾಲ್ವಿಸ್ ಮೊದಲಾದವರು ಉಪಸ್ಥಿತರಿದ್ದರು.







