ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಜ.9ರಂದು ರಾಜ್ಯಾದ್ಯಂತ ರೈಲು ಬಂದ್ ಗೆ ಕರೆ

ಸಾಂದರ್ಭಿಕ ಚಿತ್ರ
ಚಾಮರಾಜನಗರ, ಡಿ.14: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರಾಜ್ಯಾದ್ಯಂತ 2021ರ ಜನವರಿ 9 ರಂದು ರೈಲು ಬಂದ್ ಚಳವಳಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜು ಜಿಲ್ಲಾಡಳಿತ ಭವನದ ಮುಂದೆ ತಮ್ಮ ಬೆಂಬಲಿಗರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಮುಂದಿನ ತಿಂಗಳು ಎರಡನೇ ಹಂತದ ಚಳವಳಿ ಆರಂಭಿಸಲಾಗುತ್ತಿದ್ದು ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು. ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹಾಗು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಹಾದು ಹೋಗಿರುವ ರೈಲು ಹಳಿಗಳ ಮೇಲೆ ಕುಳಿತು ಸತ್ಯಾಗ್ರಹ ನಡೆಸಿ ರೈಲು ತಡೆ ನಡೆಸಲಾಗುವುದು ಎಂದರು.
ರಾಜ್ಯಾದ್ಯಂತ ಈಗಾಗಲೇ ಎರಡು ಸಾವಿರ ಕನ್ನಡಪರ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿವೆ. ಅಂದು ಪ್ರಯಾಣಿಕರು ರೈಲು ನಿಲ್ದಾಣದ ಕಡೆ ಬರಬಾರದು ಎಂದು ಅವರು ಮನವಿ ಮಾಡಿದರು. ಇದು ಕನ್ನಡಿಗರ ಉಳಿವಿನ ಪ್ರಶ್ನೆಯಾಗಿದ್ದು, ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ವಾಟಾಳ್ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೊರನಾಡು ಗೊತ್ತಿಲ್ಲ. ಗಡಿನಾಡು ಗೊತ್ತಿಲ್ಲ. ಸಾಂಸ್ಕೃತಿಕವಾದ ಚಿಂತನೆ ಇಲ್ಲ. ಬಹು ಸಂಖ್ಯಾತರಿದ್ದಾರೆ ಎಂದು ನಿಗಮ ಮಾಡಲು ಹೊರಟಿದ್ದಾರೆ. ನಾಳೆ ತಮಿಳರು, ಮಾರ್ವಾಡಿಗಳಿಗೂ ಕೊಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಕಡೆ ಎಂಇಎಸ್ ಬೆಳಗಾವಿಯಲ್ಲಿ ಪ್ರತಿನಿತ್ಯ ಗೂಂಡಾಗಿರಿ ಮಾಡುತ್ತಿದ್ದಾರೆ. ಶಿವಸೇವೆ ಅವರು ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು ಎಂದು ಹೇಳುತ್ತಿದ್ದಾರೆ. ನಿಗಮ ರಚನೆಯಿಂದಾಗಿ ಮುಂದಿನ ದಿನಗಳಲ್ಲಿ ನಾವು ಭಾರೀ ಏಟು ತಿನ್ನಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.







