ಮೀನುಗಳಿಗೆ ಫಾರ್ಮಾಲಿನ್ ರಾಸಾಯನಿಕ ಬಳಕೆ ವಿರುದ್ಧ ಕ್ರಮಕ್ಕೆ ಮನವಿ

ಉಡುಪಿ, ಡಿ.14: ಮೀನುಗಳು ಬೇಗನೆ ಕೆಡದಂತೆ ಫಾರ್ಮಾಲಿನ್ (ಶವ ಕೊಳೆಯದ ಹಾಗೆ ಬಳಸುವ ಕೆಮಿಕಲ್) ಬಳಕೆ ಮಾಡಿ ಜನರಿಗೆ ವಿಷ ಉಣಿಸುತ್ತಿರುವ ದುಷ್ಟ ವ್ಯವಸ್ಥೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಬ್ರಹ್ಮಾವರದ ಆಲ್ವಿನ್ ಅಂದ್ರಾದೆ ಪಾಂಡೇಶ್ವರ ಇವರ ನೇತೃತ್ವದಲ್ಲಿ ಜಿಲ್ಲಾದಿಕಾರಿ ಜಿ.ಜಗದೀಶ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಕ್ಷಣವೇ ಜಿಲ್ಲಾಧಿಕಾರಿಗಳು ಈ ಮಾಫಿಯಾದ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದರಲ್ಲದೇ, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆಹಾರದಲ್ಲಿ ವಿಷ ಉಣಿಸುವವರ ಅಪರಾಧ ಖಂಡಿತ ಸಹಿಸಲು ಸಾಧ್ಯವಿಲ್ಲ. ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ತಂಡದಲ್ಲಿ ನ್ಯಾಯವಾದಿ ಚೋರಾಡಿ ಕೃಷ್ಣರಾಜ್ ಶೆಟ್ಟಿ, ಸಾಲಿಗ್ರಾಮದ ವಿನಯ್ಕುಮಾರ್ ಕಬಿಯಾಡಿ ಮತ್ತು ಟೀಮ್ ಅಭಿಮತದ ವಸಂತ್ ಗಿಳಿಯಾರ್ ಉಪಸ್ಥಿತರಿದ್ದರು.
ಕರಾವಳಿಯಲ್ಲಿ ಸಿಗುವ ತಾಜಾ ಮೀನಿಗೆ ಫಾರ್ಮಾಲಿನ್ ಬೆರೆಸಿ ಅದನ್ನು ಹಾಳಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಹಿಂದೆಯೂ ಕೇಳಿ ಬಂದಿತ್ತು. ಸುಮಾರು ಎರಡು ವರ್ಷಗಳ ಹಿಂದೆ ಗೋವಾ ಸರಕಾರ ಇದೇ ಕಾರಣ ನೀಡಿ ಕರ್ನಾಟಕದಿಂದ ಆಮದಾಗುವ ಮೀನನ್ನು ನಿಷೇಧಿಸಿತ್ತು. ಅಂದು ತಮಿಳುನಾಡಿನಿಂದ ಮಲ್ಪೆಗೆ ಬರುತಿದ್ದ ಮೀನಿನಲ್ಲಿ ಫಾರ್ಮಾಲಿನ್ ಇದೆ ಎಂದು ಇಲ್ಲಿನ ಮೀನುಗಾರರು ಹೇಳಿದ್ದರು. ಸತತ ಪ್ರಯತ್ನದ ಬಳಿಕ ಗೋವಾ ಸರಕಾರ ಕರಾವಳಿಯ ಮೀನಿಗೆ ಹೇರಿದ ನಿಷೇಧವನ್ನು ವಾಪಾಸು ಪಡೆದಿತ್ತು.
ಫಾರ್ಮಾಲಿನ್ ಬೆರೆಸಿದ ಮೀನನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವುದು ಖಚಿತ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಈಗ ಮತ್ತೆ ಈ ದಂಧೆ ಆರಂಭಗೊಂಡಿದೆ. ಮೊದಲು ಪಾಂಪ್ಲೆಟ್, ಅಂಜಲ್ ಹಾಗೂ ಸಿಗಡಿಯಂಥ ಬೆಳೆಬಾಳುವ ಮೀನಿಗೆ ಈ ವಿಷಕಾರಿ ರಾಸಾಯನಿಕವನ್ನು ಬಳಸಲಾಗುತಿದ್ದರೆ, ಈಗ ಬಂಗುಡೆ, ನಂಗು, ಅಡಾಮೀನು, ಕೊಡುವಾಯಿಯಂಥ ಜನಸಾಮಾನ್ಯರು ತಿನ್ನುವ ಮೀನಿಗೂ ಬಳಸಲಾಗುತ್ತಿದೆ ಎಂದು ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆಲ್ವಿನ್ ಅಂದ್ರಾದೆ ತಿಳಿಸಿದ್ದಾರೆ.







