ಪ್ರಚೋದನಕಾರಿ ಗೋಡೆಬರಹ - ನಾಲ್ಕನೇ ಆರೋಪಿಗೆ ಶೋಧ: ಕಮಿಷನರ್
ಮಂಗಳೂರು, ಡಿ.14: ಪ್ರಚೋದನಕಾರಿ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಕೂಡ ಶಾಮೀಲಾಗಿರುವುದು ಕಂಡುಬಂದಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದರು.
ಇತ್ತೀಚೆಗೆ ಬಂಧಿತನಾದ ತೀರ್ಥಹಳ್ಳಿಯ ಸಾದತ್ (50) ಎಂಬವರನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ವರದಿ ಬಂದಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಮನವಿ ಮಾಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಗಳ ಹುಡುಕಾಟ ನಡೆದಿದೆ. ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೆ ತಾಂತ್ರಿಕ ಸಾಕ್ಷ ಕೂಡ ಮಹತ್ವದ್ದಾಗಿದ್ದು, ಅವುಗಳನ್ನೂ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಸಿ ಕ್ಯಾಮೆರಾ ದುರಸ್ತಿ: ಇಲಾಖೆಯಿಂದ ನಗರದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳಲ್ಲಿ ಹಾಳಾದವುಗಳನ್ನು ದುರಸ್ತಿಗೆ ಕಳುಹಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅವುಗಳನ್ನು ಪುನರ್ ಸ್ಥಾಪಿಸಲಾಗುತ್ತದೆ. ನಗರದಲ್ಲಿ ಖಾಸಗಿ ಸೇರಿದಂತೆ ಒಟ್ಟು 18,500 ಸಿಸಿಟಿವಿ ಕ್ಯಾಮರಾಗಳಿದ್ದು, ಇವೆಲ್ಲವೂ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ ಬರುವುದರಿಂದ ಎಲ್ಲ ಸಿಸಿ ಕ್ಯಾಮರಾಗಳು ಸುಸ್ಥಿತಿಯಲ್ಲಿರುವಂತೆ ಮೇಲ್ವಿಚಾರಣೆ ನೋಡಿಕೊಳ್ಳಲಾಗುತ್ತಿದೆ ಎಂದು ವಿಕಾಶ್ ಕುಮಾರ್ ತಿಳಿಸಿದರು.







