ವಿಸ್ಟ್ರಾನ್ ಕಂಪೆನಿಯಲ್ಲಿ ದಾಂಧಲೆ ಆಘಾತಕಾರಿ: ಆರ್.ವಿ.ದೇಶಪಾಂಡೆ

ಬೆಂಗಳೂರು, ಡಿ.14: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐ ಫೋನ್ ತಯಾರಿಕಾ ಘಟಕದಲ್ಲಿ ಕೆಲ ಕಾರ್ಮಿಕರು ನಡೆಸಿದ ದಾಂಧಲೆ ನಿಜಕ್ಕೂ ಬಹಳ ಆಘಾತಕಾರಿ ಹಾಗೂ ದುಃಖಕರ ಸಂಗತಿ ಎಂದು ಮಾಜಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ರಾಜ್ಯದ ಕಾರ್ಮಿಕರು ಬಹಳ ಒಳ್ಳೆಯವರು ಹಾಗೂ ಸಹನಶೀಲರು. ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು. ಕಾರ್ಮಿಕರು ಶಾಂತಿ ಸಂಯಮದಿಂದ ತಮ್ಮ ನ್ಯಾಯಯುತವಾದ ಬೇಡಿಕೆಗಳಿದ್ದಲ್ಲಿ, ಆ ಬಗ್ಗೆ ತಮ್ಮ ಕಾರ್ಮಿಕ ಸಂಘಟನೆಗಳ ಮೂಲಕ ಚರ್ಚಿಸಿ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಕಾರ್ಖಾನೆಯ ಆಡಳಿತ, ಸರಕಾರ ಯೋಗ್ಯವಾದ ವೇದಿಕೆಗಳಿವೆ ಎಂದು ಅವರು ಹೇಳಿದ್ದಾರೆ.
ಸೂಕ್ತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡದೆ ಇಂತಹ ಕೃತ್ಯಕ್ಕಿಳಿದರೆ ಹೂಡಿಕೆದಾರರಿಗೆ ತಪ್ಪು ಸಂದೇಶ ನೀಡುವುದೇ ಅಲ್ಲದೆ, ಅವರನ್ನು ದೃತಿಗೆಡಿಸಿ ಬಂಡವಾಳ ಹೂಡಲು ಹಿಂಜರಿಯುವಂತೆ ಮಾಡಬಹುದು. ಹೂಡಿಕೆದಾರರಿದ್ದರೆ ಮಾತ್ರ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ. ಇದರಿಂದ, ರಾಜ್ಯ, ದೇಶದ ಆರ್ಥಿಕತೆಗೂ ತೀವ್ರ ಹಿನ್ನಡೆಯಾಗಬಹುದು ಎಂದು ಆರ್.ವಿ.ದೇಶಪಾಂಡೆ ಆತಂಕ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಐ ಫೋನ್ ತಯಾರಾಗುವ ಕಾರ್ಖಾನೆ ಇದೆ ಎನ್ನುವುದು ನಮಗೊಂದು ಹೆಮ್ಮೆಯ ವಿಷಯ. ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಉದ್ಯಮ ಸ್ನೇಹಿ ವಾತಾವರಣವಿದ್ದರೆ ಬಂಡವಾಳ ಹೂಡಲು ಕೈಗಾರಿಕೆಗಳು ಮುಂದೆ ಬರುತ್ತವೆ. ಇದರಿಂದ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಠಿಯಾಗಲಿದೆ. ಆದುದರಿಂದ, ಈ ಬಗ್ಗೆ ಸರಕಾರ ಕೂಡಲೆ ಮಧ್ಯಪ್ರವೇಶಿಸಿ ಶಾಂತಿಯುತವಾದ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.







