ಸಿಲಿಕಾನ್ ಸಿಟಿಯಲ್ಲಿ ದಟ್ಟ ಮಂಜು ಕವಿಯಲು ಕಾರಣವೇನು ? ಪರಿಸರವಾದಿಗಳು ಏನು ಹೇಳುತ್ತಾರೆ ?
ಬಾಬುರೆಡ್ಡಿ ಚಿಂತಾಮಣಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.14: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದಟ್ಟ ಮಂಜಿಗೆ ಅತಿಯಾದ ಪರಿಸರ ನಾಶ ಹಾಗೂ ಮಾಲಿನ್ಯವೇ ಕಾರಣ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಚಳಿಯು ಅಧಿಕವಾಗುತ್ತದೆ. ಈ ಸಂದರ್ಭದಲ್ಲಿ ಸಾಧಾರಣ ಮಂಜು ಹಾಗೂ ದಟ್ಟ ಮಂಜು ಕವಿಯುವುದು ಸಾಮಾನ್ಯ. ಆದರೆ, ಅಕ್ಟೋಬರ್ ನಿಂದಲೇ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು ಆಶ್ಚರ್ಯಕರವಾದದ್ದಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ 10 ಅಡಿ ಎತ್ತರದ ಮೇಲೆ ಮಂಜು ಕವಿಯುತ್ತಿದ್ದು, ಮೂರು ಅಥವಾ ಅದಕ್ಕಿಂತ ಎತ್ತರದ ಮಹಡಿಗಳ ಕಟ್ಟಡಗಳೇ ಮಾಯವಾಗುತ್ತಿವೆ. ಮಧ್ಯಾಹ್ನದ ವೇಳೆಗೆ ಬಿಸಿಲು ಬಂದಿದ್ದರೂ ಸಹ ನಗರದಲ್ಲಿ ಮಂಜಿನ ವಾತಾವರಣ ಇರುತ್ತದೆ. ಇಡೀ ದಿನ ನಗರವು ಚಳಿಯಲ್ಲಿ ನಡುಗುವಂತಾಗಿದೆ.
ಅತೀ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚು ತೇವಾಂಶ ರೂಪಗೊಂಡು ಮಂಜು ಕವಿಯಲು ಕಾರಣವಾಗಿದೆ. ಮತ್ತೊಂದು ಕಾರಣ ಋತುವಿನ ಬದಲಾವಣೆಯ ಅವಧಿ. ಅಕ್ಟೋಬರ್ ನಲ್ಲಿ ಮಳೆಯಾದರೆ ನವೆಂಬರ್-ಡಿಸೆಂಬರ್ ತಿಂಗಳು ಚಳಿಗಾಲದ ಅವಧಿಯಾಗಿದ್ದು, ಈ ಸಂದರ್ಭದಲ್ಲಿ ಆಗುವ ಬದಲಾವಣೆಯೂ ಮಂಜು ಮುಸುಕಿದ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ನೈಸರ್ಗಿಕ ವಿಕೋಪ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನು, ಅತಿಯಾದ ಕಾಡಿನ ನಾಶದಿಂದಾಗಿ ವಾತಾವರಣದಲ್ಲಿ ವೈಪರೀತ್ಯವುಂಟಾಗಿದೆ. ಅಲ್ಲದೆ, ಮರಗಳ ಸಂಖ್ಯೆಯೂ ಕಡಿಮೆಯಾಗಿರುವುದರಿಂದ ವಾತಾವರಣದಲ್ಲಿ ಇಂಗಾಲ ಡೈ ಆಕ್ಸೈಡ್ ಹಾಗೂ ಇಂಗಾಲದ ಮೋನಾಕೈಡ್ ಸೇರಿಕೊಂಡು ವಾತಾವರಣದಲ್ಲಿ ಹಲವು ಬದಲಾವಣೆ ಉಂಟಾಗುವಂತೆ ಮಾಡಿದೆ. ಮರಗಳ ನಾಶದಿಂದಾಗಿ ಮಳೆ ವ್ಯತ್ಯಯವಾಗುವುದರಿಂದಲೂ ಬದಲಾವಣೆಯಾಗಿದೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.
ಅತಿಯಾದ ಮಳೆಯಿಂದಾಗಿ ನೀರಿನಾಂಶ ವಾತಾವರಣದಲ್ಲಿ ಅಧಿಕವಿದ್ದು, ಮಂಜು ಕರಗುವುದಕ್ಕೂ ಸಮಯ ಸಿಗದಂತಾಗಿದೆ. ಇದರಿಂದಾಗಿ ಬೆಂಗಳೂರು ಸೇರಿ ಇತರ ನಗರಗಳಲ್ಲಿ ಈ ಹಿಂದಿಗಿಂತಲೂ ಅಧಿಕ ಮಳೆಯಾಗಿದೆ. ದಾಖಲೆಯ ಮಳೆ ಈ ಬಾರಿಯ ಅಕ್ಟೋಬರ್ ನಲ್ಲಿ ಸುರಿದಿದೆ. ತೇವಾಂಶದ ಪರಿಣಾಮ ಹಿಂದೆಂದೂ ಕಾಣದಂತದ ಮಂಜಿನ ಪೊರೆ ನಿರ್ಮಾಣಗೊಳ್ಳಲು ಮುಖ್ಯ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಾಕೃತಿಕ ನಿಯಮದಲ್ಲಿ ಬದಲಾವಣೆ: ಅಧಿಕ ಉಷ್ಣಾಂಶ, ವಾಯುಒತ್ತಡ, ತಾಪಮಾನದಲ್ಲಾದ ಬದಲಾವಣೆ ಹಾಗೂ ಸೈಕ್ಲೋನ್ಗಳಿಂದಾಗಿ ಅಧಿಕ ಮಳೆಯಾಗಿದೆ. ಉಷ್ಣಾಂಶ ತಾಪಮಾನ ಅಧಿಕವಾದರೆ ಮಳೆಯ ಮೇಲೂ ಪರಿಣಾಮ ಬೀರುವುದರಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಕಾರಣವಾಗುವುದು. ಮರಗಳ ನಾಶದಿಂದಾಗಿ ಪ್ರಾಕೃತಿಕ ನಿಯಮದಲ್ಲಿ ಏರುಪೇರಾಗುವುದು. ಈ ವೈಪರೀತ್ಯವೇ ಮಳೆ ಹಾಗೂ ಮಂಜು ಮುಸುಕಿದ ವಾತಾವರಣಕ್ಕೆ, ಭೂ ಮೇಲ್ಮೈ ತಾಪಮಾನ ಅಧಿಕವಾದಂತೆಲ್ಲಾ ನೀರು ಆವಿಯಾಗುವುದಕ್ಕೆ ಕಾರಣವಾಗುತ್ತದೆ.
ಇಷ್ಟು ಮೋಡ ರೂಪುಗೊಂಡು ಅದರಲ್ಲಿ ನೀರಿನ ಕಣಗಳ ಸಾಂಧ್ರತೆ ಹೆಚ್ಚಾದಂತೆ ಮಳೆಯಾಗುತ್ತದೆ. ಪ್ರಸ್ತುತ ಈ ವೈಪರೀತ್ಯವನ್ನು ಬದಲಾವಣೆ ಮಾಡಲು ಅಗತ್ಯವಿರುವಷ್ಟು ಮರಗಳ ಸಂಖ್ಯೆ ಕಡಿಮೆಯಿದೆ. ಆದುದರಿಂದಾಗಿ ಈ ಎಲ್ಲ ತೊಂದರೆಗಳಿಗೂ ಪರಿಸರ ನಾಶವೇ ಕಾರಣವಾಗಿದೆ. ಇದರಿಂದ ದಟ್ಟ ಮಂಜು ಕವಿಯುತ್ತಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.
ನಗರದಲ್ಲಿ ಕಾಣಿಸಿಕೊಳ್ಳುತ್ತಿರುವ ಎಲ್ಲ ಸಮಸ್ಯೆಗಳಿಗೂ ಪರಿಸರ ನಾಶವೇ ಕಾರಣವಾಗಿದೆ. ಶೇ.70 ರಷ್ಟು ಮರಗಳ ನಾಶ ಕಂಡುಬಂದಿದೆ. ಮರಗಳು ತೇವಾಂಶ ಹಾಗೂ ಉಷ್ಣಾಂಶದ ಪ್ರಮಾಣ ಸಮನಾಗಿರುವಂತೆ ನೋಡಿಕೊಳ್ಳುತ್ತದೆ. ಮಂಜಿನಲ್ಲಿ ಶೇ.80 ರಷ್ಟು ನೀರಿನ ಅಂಶವಿದ್ದರೆ ಮತ್ತೆ ಶೇ.20 ರಷ್ಟು ಇಂಗಾಲ ಕಣಗಳು ಸೇರಿಕೊಂಡಿರುತ್ತವೆ. ನಗರದಲ್ಲಿಂದು ಮಂಜಿನಂತಹ ಸಮಸ್ಯೆಗಳು ಉಲ್ಬಣಗೊಂಡಿರುವುದಕ್ಕೆ ತೇವಾಂಶ ಹಾಗೂ ಮಾಲಿನ್ಯವೇ ಕಾರಣ. ಇದು ಅಧಿಕವಾಗಲು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗೆ ಮೂಲ ಕಾರಣ ಪರಿಸರ ನಾಶ.
-ಯಲ್ಲಪ್ಪರೆಡ್ಡಿ, ಪರಿಸರ ತಜ್ಞರು







