ರೈತರು ವಿಷ ಕುಡಿದಾಗ ಇರದ ಕಳವಳ ಪಿಝ್ಝಾ ತಿಂದಾಗ ಏಕೆ?: ನಟ ದಿಲ್ಜಿತ್ ದೊಸಾಂಜ್ ಪ್ರಶ್ನೆ

ಹೊಸದಿಲ್ಲಿ, ಡಿ. 14: ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿ ಗಡಿಯಲ್ಲಿ ಕಳೆದ ವಾರ ರೈತರಿಗೆ ಪಿಝ್ಝಾ ವಿತರಿಸಿದ್ದು, ಇದನ್ನು ನಟ-ಗಾಯಕ ದಿಲ್ಜಿತ್ ದೊಸಾಂಜ್ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವರ್ಷದ ಅತಿ ದೊಡ್ಡ ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ‘ಉಡ್ತಾ ಪಂಜಾಬ್’ನ 36 ವರ್ಷದ ನಟ ಟ್ವೀಟ್ ಮಾಡಿದ ಚಿತ್ರವೊಂದರಲ್ಲಿ ರೈತರು ವಿಷ ಕುಡಿದಾಗ ಎಂದಿಗೂ ಕಳವಳ ವ್ಯಕ್ತವಾಗಿಲ್ಲ. ಆದರೆ, ರೈತರು ಪಿಝ್ಝಾ ತಿಂದಾಗ ಮಾತ್ರ ಸುದ್ದಿಯಾಗುತ್ತಿದೆ ಎಂದು ಹೇಳಲಾಗಿದೆ.
ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿ-ಹರ್ಯಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕಳೆದ ವಾರ ಪಿಝ್ಝಾಗಳನ್ನು ವಿತರಿಸಲಾಗಿತ್ತು.
‘‘ರೈತರು ಫಿಝ್ಝಾಗಳಿಗೆ ಹಿಟ್ಟು ಒದಗಿಸುತ್ತಾರೆ. ಆದುದರಿಂದ ಅವರು ಪಿಝ್ಝಾ ಪಡೆಯಲು ಅರ್ಹರಾಗಿದ್ದಾರೆ’’ ಎಂದು ನಾಲ್ವರು ಗೆಳೆಯರೊಂದಿಗೆ ಪಿಝ್ಝಾ ವಿತರಣೆ ಮಾಡಿದ್ದ ಶನ್ಬೀರ್ ಸಿಂಗ್ ಸಂಧು ಹೇಳಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಈ ತಿಂಗಳ ಆರಂಭದಲ್ಲಿ ದಿಲ್ಜಿತ್ ದೊಸಾಂಜ್ ಅವರು ಪ್ರತಿಭಟನೆ ನಡೆಯುತ್ತಿದ್ದ ದಿಲ್ಲಿ-ಹರ್ಯಾಣ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭ ಅವರು, ‘‘ನಮ್ಮದು ಒಂದೇ ಒಂದು ಮನವಿ...ನಮ್ಮ ರೈತರ ಬೇಡಿಕೆಗಳನ್ನು ಈಡೇರಿಸಿ. ಇಲ್ಲಿ ಪ್ರತಿಯೊಬ್ಬರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ಸಂಪೂರ್ಣ ದೇಶ ರೈತರ ಬೆಂಬಲಕ್ಕಿದೆ. ಈ ಪ್ರತಿಭಟನೆ ನಮ್ಮ ರೈತರದ್ದು’’ ಎಂದು ಅವರು ಹೇಳಿದ್ದರು.







