ಪಡುಪಣಂಬೂರು: ಮಗು ಸಹಿತ ದಂಪತಿಯ ಮೃತದೇಹ ಪತ್ತೆ
ಪತ್ನಿ, ಮಗನಿಗೆ ವಿಷವುಣಿಸಿ ವ್ಯಕ್ತಿ ಆತ್ಮಹತ್ಯೆಗೈದಿರುವ ಶಂಕೆ

ಮುಲ್ಕಿ, ಡಿ.14: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಒಂದೇ ಕುಟುಂಬದ ಮೂವರ ಮೃತದೇಹಗಳು ಸೋಮವಾರ ಮನೆಯೊಳಗೆ ಪತ್ತೆಯಾಗಿದೆ.
ವಿನೋದ್ ಸಾಲ್ಯಾನ್ (38), ಪತ್ನಿ ರಚನಾ (38), ಪುತ್ರ ಸಾಧ್ಯ (10) ಮೃತಪಟ್ಟವರು. ವಿನೋದ್ ಅವರು ಪತ್ನಿ ಹಾಗೂ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶನಿವಾರ ರಾತ್ರಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಕೃತ್ಯ ಬೆಳಕಿಗೆ ಬಂದಿದೆ.
ವಿನೋದ್ ಸಾಲ್ಯಾನ್ ಮುಂಬೈಯಲ್ಲಿ ಟಾಟಾ ಹೌಸಿಂಗ್ ನಲ್ಲಿ ಕೆಲಸಕ್ಕಿದ್ದು ವರ್ಷದ ಹಿಂದೆ ಊರಿಗೆ ಆಗಮಿಸಿ ಹಳೆಯಂಗಡಿ ಸಮೀಪದ ಪಡುಪಣಂಬೂರಿನ ಬೆಳ್ಳಾಯರು ಕಲ್ಲಾಪು ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಎರಡು ದಿನಗಳಿಂದ ವಿನೋದ್ ಸಾಲ್ಯಾನ್ ಹಾಗೂ ಪತ್ನಿ, ಮಗ ಮನೆಯಿಂದ ಹೊರಗೆ ಬರದೇ ಇದ್ದುದನ್ನು ಕಂಡು ಸಂಶಯಗೊಂಡು ಸ್ಥಳೀಯರು ಮನೆಯ ಕಿಟಕಿ ಒಡೆದು ನೋಡಿದಾಗ ಮೃತದೇಹ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮೃತ ವಿನೋದ್ ಸಾಲ್ಯಾನ್ ಕುತ್ತಿಗೆಯಲ್ಲಿ ಬಟ್ಟೆ ಸಹಿತ ಮೊಬೈಲ್ ಚಾರ್ಜರ್‌ನ ವಯರ್ ಕಂಡುಬಂದಿದೆ. ಪತ್ನಿ ಹಾಗೂ ಪುತ್ರನಿಗೆ ವಿಷ ನೀಡಿ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಮುಲ್ಕಿ ಸರ್ಕಲ್ ಇನ್‌ಸ್ಪೆಕ್ಟರ್ ಕುಸುಮೋಧರ್, ಎಸ್ಸೈ ವಿನಾಯಕ ತೋರಗಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.