ಅಂಬೇಡ್ಕರ್ ಜಾತಿ, ಧರ್ಮವನ್ನು ಮೀರಿ ಬೆಳೆದವರು: ಸಾಹಿತಿ ಪ್ರೊ.ಕೆ.ಎಸ್.ಭಗವಾನ್

ಮೈಸೂರು,ಡಿ.14: ಜಾತಿ, ಮತ ಮತ್ತು ಧರ್ಮವನ್ನು ಮೀರಿ ಬೆಳೆದವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್. ಅವರ ಹಾದಿಯಲ್ಲಿ ನಡೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.
ನಂಜನಗೂಡು ನಗರದ ಕೆ.ಎಚ್.ಬಿ.ಕಾಲನಿಯ ಉದ್ಯಾನವನದಲ್ಲಿ ಆಯೋಜಿಸಿದ್ದ ಝೀ ಕನ್ನಡ ವಾಹಿನಿಯಲ್ಲಿ ಪ್ರವಾಸರವಾಗುತ್ತಿರುವ “ಮಹಾನ್ ನಾಯಕ” ಫ್ಲೆಕ್ಸ್ ಅನಾವರಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿದರು.
ಬಾಬಾ ಸಾಬೇಬರು ಒಂದು ಜಾತಿಗೆ ಸೀಮಿತರಾದವರಲ್ಲ. ಈ ದೇಶದ ಎಲ್ಲರಿಗೂ ಸಮಾನವಾದ ಹಕ್ಕನ್ನು ನೀಡಿದವರು. ಅವರು ದಲಿತರಿಗಷ್ಟೇ ಸೀಮಿತವಲ್ಲ, ಎಲ್ಲಾ ವರ್ಗಗವರಿಗೂ ಸೇರಬೇಕಾದವರು. ಅವರು ಮಂಡಿಸಿರುವ ಸಂವಿಧಾನವನ್ನು ಇಡೀ ವಿಶ್ವವೇ ಒಪ್ಪಿದೆ. ಅಂತಹ ಮಹಾನ್ ನಾಯಕ ವಿಶ್ವದಲ್ಲಿ ಮತ್ತೊಬ್ಬರಿಲ್ಲ ಎಂದು ಬಣ್ಣಿಸಿದರು.
ನಮ್ಮನ್ನು ಆಳುತ್ತಿರುವ ವೈದಿಕ ಶಾಹಿಗಳು ಯುವ ಪೀಳಿಗೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ದಲಿತ ಹಿಂದುಳಿದ ವರ್ಗವದವರನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹಿಂದುತ್ವವನ್ನು ಹೇರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹಾಗಾಗಿ ಯುವಕರು ಹಿಂದೂಗಳಾಗದೆ ಮುಂದೂಗಳಾಗಬೇಕು ಎಂದು ಹೇಳಿದರು.
ಹಿಂದೂ ಧರ್ಮದಲ್ಲಿ ಮೇಲು ಕೀಳು ಎಂಬ ಬಾವನೆ ಇದೆ. ಹಾಗಾಗಿಯೇ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಬೌದ್ಧ ಧರ್ಮದಲ್ಲಿ ಎಲ್ಲರೂ ಸಮಾನರು, ಬೌದ್ಧ ಧರ್ಮಪಾಲನೆಯಲ್ಲಿ ನಾವೆಲ್ಲರೂ ತೊಡಗಬೇಕು ಎಂದು ಹೇಳಿದರು.
ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ, ಅಂದು ಭಾರತದ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಟ ಮಾಡಿದೆವು. ಆದರೆ ಇಂದು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಿದೆ. ಮೋದಿ ನಮ್ಮಲ್ಲಿನ ಆರ್ಥಿಕತೆಯನ್ನು ನಾಶ ಮಾಡುತ್ತಿದ್ದಾರೆ. ಹಾಗಾಗಿಯೇ ಎಲ್ಲಾ ವಲಯಗಳನ್ನು ಖಾಸಗೀಕರಣಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಮಹಿಳೆಯರಿಗೆ ಮೀಸಲಾತಿಯನ್ನು ನೀಡಿದರು. ಎಲ್ಲರೂ ಸಮಾನರು ಎಂದು ಮತದಾನದ ಹಕ್ಕನ್ನು ನೀಡಿದರು. ಇಂದು ನಾವು ನೀವು ಧೈರ್ಯವಾಗಿ ಮಾತನಾಡುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ ಎಂದು ಹೇಳಿದರು.
ಬಿಜೆಪಿ ವಿರುದ್ಧ ಮಾತನಾಡಿದವರ ಮೇಲೆ ಕೇಸುಗಳನ್ನು ಹಾಕಿಸುತ್ತಾರೆ. ನಾವು ಬಿಜೆಪಿ ವಿರುದ್ಧ ಮಾತನಾಡುತ್ತಿಲ್ಲ. ಸಂವಿಧಾನದ ವಿರೋಧಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವು ನೀವು ಮಾಡುತ್ತಿದ್ದೇವೆ. ಅಂಬೇಡ್ಕರ್ ಸಂವಿಧಾನ ನೀಡುವ ಮೂಲಕ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಹಾಗಾಗಿ ನಾವು ಯಾರಿಗೂ ಎದರದೆ ನಿರ್ಭಯವಾಗಿ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸಿದರೆ ಸುಪ್ರೀಂಕೋರ್ಟ್ ನಲ್ಲೇ ಸಂವಿಧಾನದ ಮೂಲಕವೇ ಕೇಸುಗಳನ್ನು ಗೆಲ್ಲುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರು ಮತ್ತು ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಹನುಮಯ್ಯ, ಸಮಾಜ ಸೇವಕ ಲಕ್ಷ್ಮಣ್ ಸ್ವಾಮಿ, ಕೊರೋನ ವಾರಿಯರ್ಸ್‍ಗಳಾದ ನರ್ಸ್ ಶೋಭಾ ಮಾರ್ಗರೇಟ್, ಆಶಾ ಕಾರ್ಯಕರ್ತೆ ಸುಶೀಲಮ್ಮ, ಪೊಲೀಸ್ ದಫೇದಾರ್ ರಾಚಪ್ಪ, ಪೌರಕಾರ್ಮಿಕ ಮಹದೇವ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್, ಎನ್.ಎಸ್.ಯೋಗೀಶ್, ಮೀನಾಕ್ಷಿ ನಾಗರಾಜು, ದೊರೆಸ್ವಾಮಿ, ತಾ.ಪಂ.ಉಪಾಧ್ಯಕ್ಷ ಸಿ.ಎಂ.ಮಹದೇವಯ್ಯ ಉಪಸ್ಥಿತರಿದ್ದರು.
ಕೆ.ಎಚ್.ಬಿ.ಕಾಲೋನಿಯ ಹಿರಿಯ ನಾಗರಿಕರಾದ ಗುರುಮಲ್ಲಪ್ಪ, ನೇರಳೆ ಗುರುಸಿದ್ದಪ್ಪ, ಪುಟ್ಟನಂಜಯ್ಯ, ಕೆ.ಸುರೇಶ್, ಎಂಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಕಳಲೆ ನಾಗರಾಜು, ಹೀರಯನ್, ಜಯರಾಜು, ಪುಟ್ಟಸ್ವಾಮಿ, ಡಾ.ಚಿದಾನಂದ, ರಮೇಶ್, ಅನಂತ, ಪ್ರಾಂಶುಪಾಲ ಶಂಕರನಾರಾಯಣ್, ಮಧು, ಸಂಜಯ್, ಚೇತನ್, ಕಾಂಗ್ರೆಸ್ ಮುಖಂಡರುಗಳಾದ ದೊರೆಸ್ವಾಮಿ, ಸಿ.ಎಂ.ಮಹದೇವಯ್ಯ, ಮಾಜಿ ಜಿ.ಪಂ.ಸದಸ್ಯರುಗಳಾದ ಶಶಿರೇಖ, ಚೋಳರಾಜ್, ಭಾಗವಹಿಸಿದ್ದರು. ದಸಂಸ ಮುಖಂಡರುಗಳಾದ ಚುಂಚನಹಳ್ಳಿ ಮಲ್ಲೇಶ್, ಶೇಖಿ ದಲಿತ್, ಯಶವಂತ್, ರಾಜೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.
ಎದೆ ಬಗೆದರೆ ಅಪ್ಪ, ಅಮ್ಮ ಕಾಣುವುದಿಲ್ಲವೇ ? ಮಹೇಶ್ ಚಂದ್ರಗುರು ಪ್ರಶ್ನೆ
ಎದೆ ಬಗೆದರೆ ಮೋದಿ ಕಾಣುತ್ತಾರೆ ಎಂದು ಕೆಲವರು ಹೇಳುತ್ತಾರೆ. ಹಾಗಿದ್ದರೆ ಮೋದಿ ಏನು ಅವರ ಅಪ್ಪನೇ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಪ್ರಶ್ನಿಸಿದರು.
ಕೆಲವರು ಬಹಳ ಅಂದವಾಗಿ ಮಾತನಾಡುತ್ತಾರೆ. ಎದೆ ಬಗೆದರೆ ಮೋದಿ ಕಾಣುತ್ತಾರೆ ಎನ್ನುವವರಿಗೆ ಅವರ ಅಪ್ಪ, ಅಮ್ಮ ಕಾಣುವುದಿಲ್ಲವೇ? ಹಾಗಿದ್ದ ಮೇಲೆ ಮೋದಿ ಇವರ ಅಪ್ಪನೇ ಎಂದು ಕಿಡಿಕಾರಿದರು.
ಕೆಲವರು ತಮ್ಮ ತಂದೆ ತಾಯಿಗೆ ಗೌರವ ಕೊಡುವ ಬದಲು ಕೆಲವು ರಾಜಕೀಯ ನಾಯಕರನ್ನು ಓಲೈಸಿಕೊಳ್ಳಲು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ. ಮೊದಲು ನಾವು ಮಾನವರಾಗಬೇಕು, ಎಲ್ಲರಿಗೂ ಗೌರವ ನೀಡುವುದನ್ನು ಕಲಿಯಬೇಕು, ಅಂಧಕಾರಕ್ಕೆ ಒಳಗಾಗಿ ಗುಲಾಮರಾಗಬಾರದು ಎಂದು ಹೇಳಿದರು.







