ಗ್ರಾಪಂ ಸಾರ್ವತ್ರಿಕ ಚುನಾವಣೆ: ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆ ಹಂಚಿಕೆ
ಮಂಗಳೂರು, ಡಿ.14: ಗ್ರಾಪಂ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದ್ದು, ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳನ್ನು ಏರ್ಪಡಿಸಿ, ವೇದಿಕೆ ಮೇಲೆ ಪಕ್ಷದ ಬಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ/ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಭಾವಚಿತ್ರ/ ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು/ ಹಂಚುವುದು ಮಾಡಬಾರದು. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‌ಗಳು, ಬ್ಯಾನರ್ ಮತ್ತು ಬಂಟಿಂಗ್ ಗಳ ಮೂಲಕ ಪ್ರಚಾರ ಮಾಡಬಾರದು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸುದ್ದಿವಾಹಿನಿಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡಬಾರದು.
ಈ ರೀತಿಯ ಪ್ರಕರಣಗಳು ಗ್ರಾಪಂ ಚುನಾವಣೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಚುನಾವಣಾ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







