ಅವೆುರಿಕ ಸರಕಾರದ ಇಲಾಖೆಗಳ ಮೇಲೆ ರಶ್ಯ ಕನ್ನಗಾರರಿಂದ ದಾಳಿ

ವಾಶಿಂಗ್ಟನ್, ಡಿ. 14: ತನ್ನ ಕಂಪ್ಯೂಟರ್ ಜಾಲದ ಮೇಲೆ ಸೈಬರ್ ದಾಳಿ ನಡೆಸಲಾಗಿದೆ ಎನ್ನುವುದನ್ನು ಅಮೆರಿಕ ಸರಕಾರ ರವಿವಾರ ಖಚಿತಪಡಿಸಿದೆ.
ಖಜಾನೆ ಇಲಾಖೆ ಸೇರಿದಂತೆ ಕನಿಷ್ಠ ಎರಡು ಇಲಾಖೆಗಳ ಮೇಲೆ ರಶ್ಯದ ಸರಕಾರಿ ಕನ್ನಗಾರರು ಸೈಬರ್ ದಾಳಿ ನಡೆಸಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು.
‘‘ಸರಕಾರಿ ಜಾಲಗಳಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾದ ಚಟುವಟಿಕೆಗಳಿಗೆ ಸಂಬಂಧಿಸಿ ನಾವು ನಮ್ಮ ಏಜನ್ಸಿ ಭಾಗೀದಾರರ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ’’ ಎಂದು ಸೈಬರ್‌ಸೆಕ್ಯುರಿಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ ಏಜನ್ಸಿ (ಸಿಐಎಸ್‌ಎ)ಯ ವಕ್ತಾರರೋರ್ವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘ಯಾವುದೇ ಸಂಭಾವ್ಯ ಸೈಬರ್ ದಾಳಿಯನ್ನು ಪತ್ತೆಹಚ್ಚಲು ಮತ್ತು ಸೋರಿಕೆಯನ್ನು ಮುಚ್ಚಲು ಸಂಬಂಧಿತ ಇಲಾಖೆಗಳು ಕೆಲಸ ಮಾಡುತ್ತಿದ್ದು, ಅವುಗಳಿಗೆ ಸಿಐಎಸ್‌ಎ ತಾಂತ್ರಿಕ ನೆರವನ್ನು ನೀಡುತ್ತಿದೆ’’ ಎಂದರು.
ಕಳೆದ ವಾರ ಸೈಬರ್ ಸೆಕ್ಯುರಿಟಿ ಸಂಸ್ಥೆ ‘ಫಯರ್‌ಐ’ ಮೇಲೆ ನಡೆದ ಸೈಬರ್ ದಾಳಿಗೂ ಸರಕಾರಿ ಇಲಾಖೆಗಳ ಮೇಲೆ ನಡೆದ ಸೈಬರ್ ದಾಳಿಗೂ ನಂಟಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಹೇಳಿದೆ. ಕೌಶಲಭರಿತ ಸೈಬರ್ ದಾಳಿಕೋರರು ನಮ್ಮ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ‘ಫಯರ್‌ಐ’ ಹೇಳಿದೆ. ಬಳಕೆದಾರರ ಕಂಪ್ಯೂಟರ್ ವ್ಯವಸ್ಥೆಗಳನ್ನು ಪರೀಕ್ಷಿಸುವ ಟೂಲ್‌ಗಳನ್ನು ಕದ್ದು ಈ ದಾಳಿ ನಡೆಸಲಾಗಿದೆ ಎಂದು ಅದು ತಿಳಿಸಿದೆ.







