ರಾಷ್ಟ್ರಪತಿ ಯಾಕೆ ಇಲ್ಲ?
ಮಾನ್ಯರೇ,
ದೇಶದ ಹೊಸ ಸಂಸತ್ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಯಾರು ಮುಖ್ಯ ಅತಿಥಿಗಳಾಗಿರಬೇಕು? ಆ ಸಮಾರಂಭದ ವೇದಿಕೆಯಲ್ಲಿ ಇರಲೇಬೇಕಾದವರು ಯಾರು? ಈ ಪ್ರಶ್ನೆಯನ್ನು ಶಾಲೆಗೆ ಹೋಗುವ ಮಕ್ಕಳಿಗೆ ಕೇಳಿದರೂ ದೇಶದ ರಾಷ್ಟ್ರಪತಿ, ಪ್ರಧಾನಿ ಎಂಬ ಉತ್ತರ ತಕ್ಷಣ ಸಿಗುತ್ತದೆ. ಇನು ಕೆಲವು ಹಿರಿಯರು, ಉಪರಾಷ್ಟ್ರಪತಿ, ಲೋಕಸಭೆ ಸ್ಪೀಕರ್, ಉಪಸಭಾಪತಿ, ಸಂಸದೀಯ ವ್ಯವಹಾರಗಳ ಸಚಿವರು ಇತ್ಯಾದಿ ಹೆಸರುಗಳನ್ನೂ ಸೇರಿಸಬಹುದು. ಆದರೆ ‘ವಿಶ್ವಗುರು’ ಹೊಸ ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ! ರಾಷ್ಟ್ರಪತಿ ಭವನದ ಪಕ್ಕದಲ್ಲೇ ನಡೆಯುವ ಹೊಸ ಸಂಸತ್ ಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ರಾಷ್ಟ್ರಪತಿಯೇ ಇಲ್ಲ! ಇದೆಂತಹ ಪ್ರಮಾದ? ಇಷ್ಟು ದೊಡ್ಡ ಶಿಷ್ಟಾಚಾರ ಉಲ್ಲಂಘನೆ ಹೇಗಾಯಿತು? ಇದಕ್ಕೆ ಯಾರು ಕಾರಣ? ಇದು ಕೇವಲ ಅಧಿಕಾರಗಳ ಬೇಜವಾಬ್ದಾರಿಯೇ? ಅಥವಾ ಬೇಕೆಂದೇ ಹೀಗೆ ಮಾಡಲಾಯಿತೇ? ಇತ್ತೀಚೆಗೆ ನಡೆದ ಅಯೋಧ್ಯೆಯ ಹೊಸ ರಾಮ ಮಂದಿರದ ಭೂಮಿ ಪೂಜೆಯಲ್ಲೂ ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ, ರಾಜ್ಯಪಾಲರು ಭಾಗವಹಿಸಿದ್ದರು. ಆದರೆ ರಾಷ್ಟ್ರಪತಿ ಅಲ್ಲಿಯೂ ಇಲ್ಲ! ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದಲಿತ ಎಂಬುದಕ್ಕೂ ಈ ಗೈರಿಗೂ ಸಂಬಂಧವಿದೆಯೇ? ಈ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ? ಸೋಷಿಯಲ್ ಮೀಡಿಯಾದಲ್ಲಿ ಮೋದಿ ಭಜನೆ ಮಾಡುವ ಭಕ್ತರೂ ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ? ಸದಾ ಮೋದಿ ಮಾಡಿದ್ದಾರೆ ಎನ್ನಲಾದ ಸಾಧನೆಗಳ ಗುಣಗಾನ ಮಾಡುವ ಮಾಧ್ಯಮಗಳೂ ಏಕೆ ಇದನ್ನು ಕೇಳುತ್ತಿಲ್ಲ?





