ಆಧುನಿಕತೆಯ ಸ್ಪರ್ಶವಿಲ್ಲದ ಪರಂಪರೆ ಜಡವಾಗಿರುತ್ತದೆ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ

ಬೆಳ್ತಂಗಡಿ, ಡಿ.14: ಪರಂಪರೆಗೆ ಆಧುನಿಕತೆಯ ಸ್ಪರ್ಶ ದೊರೆತಾಗ ಮಾತ್ರ ಅದು ಸಮಕಾಲೀನವಾಗಲು ಸಾಧ್ಯ. ಆಧುನಿಕತೆಯ ಸ್ಪರ್ಶವಿಲ್ಲದ ಪರಂಪರೆ ಕೇವಲ ಜಡವಾಗಿರುತ್ತದೆ ಎಂದು ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಲಾಗಿರುವ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಬದುಕಿನ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರುವ ಎರಡು ವಿಚಾರಗಳು ಧರ್ಮ ಮತ್ತು ರಾಜಕೀಯ. ಇಂದಿನ ದಿನಗಳಲ್ಲಿ ಇವೆರಡೂ ಭ್ರಷ್ಟವಾಗಿದೆ. ಅದರ ಪರಿಣಾಮ ಜನರ ಮೇಲೆ ಆಗುತ್ತಿದೆ. ಅದನ್ನು ಶುದ್ಧಗೊಳಿಸುವ ಸಮಾಜದ ಆರೋಗ್ಯ ಕಾಪಾಡುವ ಶಕ್ತಿಯಿರುವುದು ಕೇವಲ ಸಾಹಿತ್ಯಕ್ಕೆ ಮಾತ್ರವಾಗಿದೆ ಎಂದರು. ಆಧುನಿಕತೆಯ ಈ ದಿನಗಳಲ್ಲಿ ಧರ್ಮವನ್ನು ಹೇಗೆ ಪರಿಚಯಿ ಸಬೇಕು ಎಂಬುದೇ ಸವಾಲಾಗಿದೆ. ಧರ್ಮದ ನಿಜವಾದ ಶಕ್ತಿಯಿ ರುವುದು ಮಾನವೀಯತೆಯಲ್ಲಿ. ಧರ್ಮಕ್ಕೆ ಬೇಕಾಗಿರುವುದು ತಾಯಿ ಹೃದಯ. ಮಾನವೀಯತೆಯಿಲ್ಲದ ಧರ್ಮವನ್ನು ಧರ್ಮ ಎಂದು ಕರೆಯಲು ಸಾಧ್ಯವಿಲ್ಲ. ಸಮಕಾಲೀನ ಸವಾಲುಗಳಿಗೆ ಉತ್ತರ ನೀಡುವ ಧರ್ಮ ಇಂದಿನ ಅಗತ್ಯವಾಗಿದೆ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ವೇದಭೂಷಣ ಡಾ.ಎಸ್.ರಂಗನಾಥ್, ಮೌಲ್ಯಗಳ ಆಧಾರದ ಮೇಲೆ ಸಾಹಿತ್ಯ ಸೃಷ್ಟಿಯಾಗಬೇಕಾದುದು ಇಂದಿನ ಅಗತ್ಯವಾಗಿದೆ ಎಂದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಡಾ.ಜ್ಯೋತೀಶಂಕರ್ ಮೈಸೂರು, ಡಾ.ಪುಂಡಿಕಾಯಿ ಗಣಪತಿ ಭಟ್ ಮೂಡುಬಿದಿರೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಡಿ.ಹರ್ಷೇಂದ್ರಕುಮಾರ್, ಡಿ.ಸುರೇಂದ್ರಕುಮಾರ್ ಉಪಸ್ಥಿತರಿದ್ದರು. ಡಾ.ಬಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಪುಸ್ತಕ ಹಾಗೂ ತತ್ವ ಓದುವ ಸಂಸ್ಕೃತಿಯನ್ನು ನಿರಂತರವಾಗಿ ಬೆಳೆಸಿಕೊಂಡು ಬರುತ್ತಿದೆ. ಕ್ಷೇತ್ರದಿಂದ ಪ್ರಕಟವಾಗುವ ಮಂಜುವಾಣಿ ಮಾಸ ಪತ್ರಿಕೆಯು ನಾಡಿನಲ್ಲಿ ಧರ್ಮ ಮತ್ತು ಸಾಹಿತ್ಯಾಭಿರುಚಿಯನ್ನು ಮೂಡಿಸುತ್ತಿದೆ. ಇದು ನಾಡಿನೆಲ್ಲೆಡೆ 8 ಲಕ್ಷಕ್ಕೂ ಹೆಚ್ಚು ಪ್ರಸಾರವಿದೆ. ದೀನ ದುರ್ಬಲರಿಗೆ ಸಹಾಯವಾಗುವ ’ವಾತ್ಸಲ್ಯ’ ಎಂಬ ಯೋಜನೆಯನ್ನು ರೂಪಿಸಿದ್ದು, ಒಂಭತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಅಶಕ್ತರಿಗೆ ಒಂಭತ್ತು ಕೋಟಿ ರೂ.ನಷ್ಟು ಮಾಸಾಶನ ನೀಡಲಾಗುತ್ತಿದೆ. ಅಲ್ಲದೆ 10 ಸಾವಿರ ಮಂದಿ ಕಡು ಬಡವರಿಗೆ ಜೀವನಾವಶ್ಯಕ ವಸ್ತುಗಳನ್ನು ಈ ಕೊರೋನ ಸಂದರ್ಭದಲ್ಲಿ ನೀಡಲಾಗಿದೆ. ಗ್ರಾಮೀಣ ಜನರಿಗೆ ಉಪಯೋಗವಾಗಲು 250ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ’ಜ್ಞಾನತಾಣ’ ಕಾರ್ಯಕ್ರಮದಡಿಯಲ್ಲಿ 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ’ಸುಜ್ಞಾನ ನಿಧಿ’ ಯೋಜನೆಯಡಿಯಲ್ಲಿ ಈವರೆಗೆ 34,897 ವಿದ್ಯಾರ್ಥಿಗಳಿಗೆ 48.91 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ಮೂಡಿಸುವ ದೃಷ್ಟಿಯಿಂದ 70 ಲಕ್ಷ ಮಹಿಳೆಯರಿಗೆ ಸ್ವ-ಉದ್ಯೋಗ, ಪರಿಸರಪ್ರಜ್ಞೆ, ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ ಹಾಗೂ ನಾಗರಿಕ ಸೌಲಭ್ಯಗಳ ಕುರಿತು ತರಬೇತಿ ನೀಡಲಾಗಿದೆ.
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ







