ಡಾ.ಪ್ರಭಾಕರ ನೀರ್‌ಮಾರ್ಗ ಅವರ ‘ಧರ್ಮ ಚಾವಡಿ’ ಕಾದಂಬರಿ ಬಿಡುಗಡೆ
ಮಂಗಳೂರು, ಡಿ.15: ಕಾದಂಬರಿಕಾರ, ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ ನೀರ್‌ಮಾರ್ಗ ಅವರ 26ನೆ ಕಾದಂಬರಿ ‘ಧರ್ಮ ಚಾವಡಿ’ ಮಂಗಳೂರಿನ ‘ವಿ4’ ಸ್ಟುಡಿಯೋದಲ್ಲಿ ಬಿಡುಗಡೆಗೊಂಡಿತು.
ತುಳು ಪರಿಷತ್ ಹಾಗೂ ವಿ4 ಸ್ಟುಡಿಯೋ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ತುಳು ಪರಿಷತ್ ಗೌರವಾಧ್ಯಕ್ಷ ಸ್ವರ್ಣ ಸುಂದರ್ ‘ಧರ್ಮ ಚಾವಡಿ’ ಕೃತಿಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಧರ್ಮ ಚಾವಡಿ ಕಾದಂಬರಿ ಕೃತಿಗೆ ಓದುಗ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಲಿ ಎಂದು ಹಾರೈಸಿದರು.
ಮುಲ್ಕಿ ಸರಕಾರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಮಾತನಾಡಿ, ಈ ಕಾದಂಬರಿಯು ತುಳುನಾಡಿನ ಬದುಕು , ಭೂತಾರಧನೆಯ ನಂಬಿಕೆ, ತುಳು ಸಂಸ್ಕೃತಿಯನ್ನು ಅನಾವರಣ ಮಾಡುತ್ತದೆ ಎಂದರು.
ಕೃತಿಕರ್ತ ಡಾ.ಪ್ರಭಾಕರ ನೀರ್‌ಮಾರ್ಗ ಕಾದಂಬರಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ವಿಮರ್ಶಕ ಪ್ರತಾಪ ಚಂದ್ರ ಶೆಟ್ಟಿ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ, ಮಂಗಳೂರು ವಿ.ವಿ. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯತೀಶ್ ಕುಡುಪು ಉಪಸ್ಥಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತುಳು ಪರಿಷತ್ ಕೋಶಾಧಿಕಾರಿ ಶುಭೋದಯ ಆಳ್ವ ವಂದಿಸಿದರು.