ಅಂತರ್-ಧರ್ಮೀಯ ವಿವಾಹವಾದ ಯುವತಿಗೆ ಪತಿ ಮನೆಗೆ ತೆರಳಬಹುದೆಂದ ಕೋರ್ಟ್: ಪತಿಗೆ ಜೈಲೇ ಗತಿ!

ಲಕ್ನೋ,ಡಿ.15: ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಐದು ತಿಂಗಳ ಹಿಂದೆ ವಿವಾಹವಾಗಿ, ಡಿಸೆಂಬರ್ 5ರಂದು ವಿವಾಹ ನೋಂದಣಿಗಾಗಿ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಪಿಂಕಿ ಹಾಗೂ ರಶೀದ್ ಎಂಬವರನ್ನು ಬಜರಂಗದಳ ಕಾರ್ಯಕರ್ತರು ತಡೆದು ತೊಂದರೆ ನೀಡಿದ್ದರು. ಬಳಿಕ ರಶೀದ್ ಹಾಗೂ ಆತನ ಸಹೋದರ ರಾಜ್ಯದ ಹೊಸ ಮತಾಂತರ ನಿಷೇಧ ಕಾಯಿದೆಯನ್ವಯ ಜೈಲು ಪಾಲಾಗಿದ್ದರು. ಇದೊಂದು ಅಂತರ-ಧರ್ಮೀಯ ವಿವಾಹವಾಗಿದ್ದರಿಂದ ಸರಕಾರಿ ಆಶ್ರಯತಾಣಕ್ಕೆ ಪಿಂಕಿಯನ್ನು ಕಳುಹಿಸಲಾಗಿತ್ತಾದರೂ ಆಕೆ ತಾನು ವಯಸ್ಕಳು ಹಾಗೂ ತನ್ನ ಸ್ವಇಚ್ಛೆಯಿಂದ ವಿವಾಹವಾಗಿದ್ದಾಗಿ ಹೇಳಿದ್ದಳು. ನಂತರ ನ್ಯಾಯಾಲಯ ಆಕೆಯನ್ನು ಆಕೆಯ ಪತಿಯ ಕುಟುಂಬಕ್ಕೆ ಮರಳಲು ಅನುಮತಿಸಿದೆಯಾದರೂ ಆಕೆಯ ಪತಿ ರಶೀದ್ ಅಲಿ ಇನ್ನೂ ಜೈಲಿನಲ್ಲಿಯೇ ಇರುವಂತಾಗಿದೆ.
ಮೂರು ತಿಂಗಳ ಗರ್ಭಿಣಿಯಾಗಿರುವ ಪಿಂಕಿಗೆ ತನ್ನ ವಿವಾಹದ ಯಾವುದೇ ಸಾಕ್ಷ್ಯವಿರಲಿಲ್ಲ ಹಾಗೂ ರಶೀದ್ ಆಕೆಯನ್ನು ಬಲವಂತದಿಂದ ಮತಾಂತರಿಸಿದ್ದಾನೆಂದು ಆಕೆಯ ಹೆತ್ತವರು ಆರೋಪಿಸಿದ್ದರು.
ಉತ್ತರ ಪ್ರದೇಶದ ಹೊಸ ಮತಾಂತರ ನಿಷೇಧ ಕಾನೂನು ಜಾರಿಯಾಗುವ ಬಹಳ ಮುಂಚೆಯೇ ಪಿಂಕಿ ಮತ್ತು ರಶೀದ್ ವಿವಾಹವಾಗಿರುವುದರಿಂದ ಹೊಸ ಕಾನೂನು ಅವರಿಗೆ ಅನ್ವಯವಾಗುವುದೇ ಎಂದು ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ ಸರಕಾರ ಹೊಸ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಿದ ನಂತರ ದಾಖಲಾದ ಐದನೇ ಪ್ರಕರಣ ಇದಾಗಿದೆ.







