ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನ ನಿರ್ಮಾಣ; ಶೀಘ್ರದಲ್ಲಿ ಶಿಲಾನ್ಯಾಸ: ರಹೀಂ ಉಚ್ಚಿಲ್
ಮಂಗಳೂರು, ಡಿ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಬಳಿ ಅಂದಾಜು 3 ಕೋಟಿ ರೂ. ಮೌಲ್ಯದ 0.25 ಎಕರೆ ಜಮೀನು ಸರಕಾರದಿಂದ ಅಧಿಕೃತವಾಗಿ ಮಂಜೂರಾಗಿದೆ. ಜನಪ್ರತಿನಿಧಿಗಳು ಹಾಗೂ ಬ್ಯಾರಿ ಭಾಷಿಕ ಸಮುದಾಯದ ಪ್ರಮುಖರನ್ನು ಕರೆದು ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಅಕಾಡಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕೆ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಸೆಂಟ್ಸ್ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖರೀದಿ ಮಾಡಲಾಗಿದ್ದು, ಇಲ್ಲಿ ಬ್ಯಾರಿ ಭವನಕ್ಕೆ ನೀಲನಕ್ಷೆ ತಯಾರಾಗಿತ್ತು. ಆದರೆ ಇದೀಗ ಈ ನಿವೇಶನದ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ತೀರಾ ವಿರಳವಾಗಿದ್ದು, ಭವನ ನಿರ್ಮಾಣಕ್ಕೆ ಉಪಯುಕ್ತವಾದ ನಿವೇಶನ ಅಲ್ಲ ಎಂದು ಮನಗಂಡು ಈ ವಿಚಾರವನ್ನು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಯ ಗಮನಕ್ಕೆ ತರಲಾಗಿತ್ತು. ತುಳು, ಕೊಂಕಣಿ ಸೇರಿದಂತೆ ಇತರ ಅಕಾಡಮಿಗಳಿಗೆ ಸರಕಾರದಿಂದ ಉಚಿತವಾಗಿ ಜಮೀನು ನೀಡಿದಂತೆ ಬ್ಯಾರಿ ಅಕಾಡಮಿಗೂ ನೀಡಬೇಕೆಂದು ಮನವಿ ಮಾಡಲಾಗಿತ್ತು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸರಕಾರ ಅತೀ ಹೆಚ್ಚು ಬ್ಯಾರಿ ಭಾಷಿಕರನ್ನು ಒಳಗೊಂಡ ತೊಕ್ಕೊಟ್ಟು ಪರಿಸರದಲ್ಲಿ ನಿವೇಶವನವನ್ನು ಉಚಿತವಾಗಿ ಒದಗಿಸಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಈಗಾಗಲೇ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗುವುದು ಹಾಗೂ ಅಕಾಡಮಿಯಿಂದ ಮುಡಾಕ್ಕೆ ಪಾವತಿಯಾದ ಮೊತ್ತವನ್ನು ಹಿಂಪಡೆದು ಅಕಾಡಮಿಯ ವಿವಿಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದರು.
ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಸಿ.ಟಿ.ರವಿ ಸಹಕಾರದಿಂದ ಬ್ಯಾರಿ ಭವನಕ್ಕೆ ಈಗಾಗಲೇ ಆರು ಕೋಟಿ ರೂ. ಅನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಇದರಲ್ಲಿ ಮೂರು ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, ಸುಮಾರು 6ರಿಂದ 12 ತಿಂಗಳ ಒಳಗಾಗಿ ಬ್ಯಾರಿ ಭವನವು ಅಕಾಡಮಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ನೂತನ ಬ್ಯಾರಿ ಭವನ ವಿಶಾಲವಾದ ಸಭಾಂಗಣ, ಮಿನಿಹಾಲ್, ಅಕಾಡಮಿಯ ಕಚೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.