ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ- ಜೆಡಿಎಸ್ ಸುದ್ದಿಗೋಷ್ಟಿ: ಘಟನೆ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು ?
ವಿಧಾನಪರಿಷತ್ ನಲ್ಲಿ ಗದ್ದಲ, ಕೋಲಾಹಲ

ಬೆಂಗಳೂರು, ಡಿ.15: ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಕಾನೂನು ಬಾಹಿರವಾಗಿ ಅಧಿವೇಶನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಮೇಲ್ಮನೆಯ ಘನತೆಗೆ ಚ್ಯುತಿಯುಂಟು ಮಾಡಿದ್ದಾರೆ. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೋರಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ದೂರು ನೀಡಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಕಲಾಪ ಮುಂದೂಡಿಕೆ ಬಳಿಕ ಸಮಾಲೋಚನೆ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಒಟ್ಟಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ದೂರು ಸಲ್ಲಿಸಿದರು. ಆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಅವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರು ಸಭಾಪತಿ ಪೀಠ ತ್ಯಜಿಸುವ ಬದಲಿಗೆ ಸಭಾಪತಿ ಪೀಠಕ್ಕೆ ಆಗಮಿಸಿದ್ದು, ಎದ್ದು ನಿಂತೇ ಅಧಿವೇಶನವನ್ನು ಅನಿರ್ದಿಷ್ಟಾವಧಿ ಮುಂದೂಡುವ ಮೂಲಕ ಪರಿಷತ್ ಘನತೆಗೆ ಚ್ಯುತಿಯುಂಟು ಮಾಡಿದ್ದಾರೆ. ಅಲ್ಲದೆ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಟೀಕಿಸಿದರು.
ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ್ದು, ಸಂವಿಧಾನದ 179 'ಸಿ' ಅನ್ವಯ ಅಧಿಕಾರವಿಲ್ಲ. ಸದನದ ವಿಶ್ವಾಸ ಕಳೆದುಕೊಂಡ ಬಳಿಕ ಅವರು ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದು ಶೋಭೆಯಲ್ಲ. ಹೀಗಾಗಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದಲೇ ಸಭಾಪತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಮಾಧುಸ್ವಾಮಿ ತಿಳಿಸಿದರು.
ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬಹುದು. ಅವರಿಗೆ ಅಧಿಕಾರವಿದ್ದು, ಸಭಾಪತಿಯವರಿಗೆ ನೋಟಿಸ್ ನೀಡಿ ವಿವರಣೆ ಕೋರಬಹುದು. ಹೀಗಾಗಿ ಅವರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಮಾಡಲಿದ್ದಾರೆಂದು ಮಾಧುಸ್ವಾಮಿ ತಿಳಿಸಿದರು.
ಸಂಪೂರ್ಣ ಬೆಂಬಲ: ಇದೇ ವೇಳೆ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಿದೆ. ಈಗಾಗಲೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು, ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕಿತ್ತು. ಅವರು ಸ್ಥಾನವನ್ನು ತ್ಯಜಿಸುತ್ತಿಲ್ಲ. ಹೀಗಾಗಿ ರಾಜ್ಯಪಾಲರಿಗೆ ನೀಡಿರುವ ಲಿಖಿತ ದೂರಿಗೆ ಜೆಡಿಎಸ್ ಸದಸ್ಯರೆಲ್ಲರೂ ಸಹಿ ಹಾಕಿದ್ದಾರೆ ಎಂದು ತಿಳಿಸಿದರು.
‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಈ ರೀತಿ ಮಾಡಿದ್ದು, ಇಂದು ವಿಧಾನಪರಿಷತ್‍ನಲ್ಲೂ ಅದನ್ನೇ ಮುಂದುವರಿಸಿದೆ. ಪರಿಷತ್ ಪೀಠಕ್ಕೆ ಅವಮಾನ ಮಾಡಿರುವುದು ಕಾಂಗ್ರೆಸ್ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದೆ’
-ಆರ್.ಅಶೋಕ್, ಕಂದಾಯ ಸಚಿವ
'ವಿಧಾನ ಪರಿಷತ್‍ನಲ್ಲಿ ನಡೆದ ಘಟನೆಯ ಕುರಿತು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಕಲಾಪ ಬೆಲ್ ನಿಂತ ಬಳಿಕ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಅವರ ಕುಳಿತಿದ್ದರು. ಅವರು ಬೆಲ್ ನಿಲ್ಲುವ ಮೊದಲೇ ಪೀಠದಲ್ಲಿ ಅವರು ಕೂತಿರಲಿಲ್ಲ'
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ
ವಿಧಾನ ಪರಿಷತ್ತಿನಲ್ಲಿ ನಡೆದ ಗದ್ದಲ-ಕೋಲಾಹಲಕ್ಕೆ ಮೂರು ರಾಜಕೀಯ ಪಕ್ಷಗಳು ಹೊಣೆ ಹೊರಬೇಕಿದೆ. ಇಂದು ನಡೆದ ಘಟನೆಗಳು ಹಿರಿಯರ ಸದನಕ್ಕೆ ಅಗೌರವ ತರುವಂತದ್ದಾಗಿದೆ. ಮಾತಿನ ಮನೆಯಲ್ಲಿ ಬಲ ಪ್ರಯೋಗದ ಘಟನೆಯಿಂದ ದೇಶಕ್ಕೆ ತಪ್ಪು ಸಂದೇಶ ಹೋಗಿದೆ. ಪ್ರಜಾಪ್ರಭುತ್ವದಲ್ಲಿ ಈ ಘಟನೆ ಆಗಬಾರದಿತ್ತು'
-ಶ್ರೀಕಂಠೇಗೌಡ, ಜೆಡಿಎಸ್ ಸದಸ್ಯ
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ನಡೆಸಿದ ಕೃತ್ಯ ಕಾನೂನು ಬಾಹಿರ. ಸಭಾಪತಿಯವರು ಕಾನೂನು ಉಲ್ಲಂಘಿಸಿದ್ದಾರೆ. ಇದೀಗ ನಾವು ಜೆಡಿಎಸ್ ಬೆಂಬಲದೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದು, ಪರಿಷತ್ತಿನ ಬೆಳವಣಿಗೆ ಮತ್ತು ಮುಂದಿನ ನಡೆಯ ಬಗ್ಗೆ ರಾಜ್ಯಪಾಲರು ತೀರ್ಮಾನ ಮಾಡಲಿದ್ದಾರೆ. ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಉಪಸಭಾಪತಿಯವರನ್ನು ಪೀಠದಲ್ಲಿ ಕೂರಿಸಿದ್ದೆವು'
-ಬಸವರಾಜ ಬೊಮ್ಮಾಯಿ, ಗೃಹ ಸಚಿವ
'ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ. ಅವರ ಸೋಲು ಎಲ್ಲ ರಂಗಗಳಲ್ಲೂ ಗೋಚರವಾಗುತ್ತಿದೆ. ಇಂದು ಸದನದಲ್ಲಿ ಅವರ ನಡವಳಿಕೆ ಈ ಸದನದ ಮೌಲ್ಯ ಹಾಗೂ ಗೌರವವನ್ನು ಕೆಡಿಸುವಂತದ್ದು. ಈ ಸದನದ ಶಿಷ್ಟಾಚಾರಕ್ಕೆ ತಕ್ಕಂತೆ ನಡೆದ ಅನೇಕ ಪುರುಷರು ಹಾಗೂ ಮಹಿಳಾ ಸದಸ್ಯರ ಉತ್ತಮ ನಡವಳಿಕೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ ಇದು. ಈ ರಾಜ್ಯದ ಜನತೆ ಇಂತಹ ಅಸಂಬದ್ಧ ನಡವಳಿಕೆಯನ್ನು ಗಮನಿಸುತ್ತಿದ್ದಾರೆ ಹಾಗೂ ವಿರೋಧಿಸುತ್ತಾರೆ ಎಂದು ಅರಿಯಬೇಕಿದೆ. ನಾನು ಈ ರಾಜ್ಯದ ಜನತೆಯಂತೆ ಇಂದು ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರು ತೋರಿದ ನಡವಳಿಕೆಯನ್ನು ಖಡಾ-ಖಂಡಿತವಾಗಿ ವಿರೋಧಿಸುತ್ತೇನೆ'
-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ







