ತಬ್ಲೀಗಿ ಜಮಾಅತ್: ಎಲ್ಲ 36 ವಿದೇಶಿ ಪ್ರಜೆಗಳನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ: ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ತಬ್ಲೀಗಿ ಜಮಾಅತ್ ಕಳೆದ ಮಾರ್ಚ್‌ನಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದಾಗ ಕೋವಿಡ್-19ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದ ಎಲ್ಲ 36 ವಿದೇಶಿ ಪ್ರಜೆಗಳನ್ನು ದಿಲ್ಲಿ ನ್ಯಾಯಾಲಯವು ಇಂದು ಖುಲಾಸೆಗೊಳಿಸಿದೆ.
ಕಳೆದ ಮಾರ್ಚ್‌ನಲ್ಲಿ ನಿಝಾಮುದ್ದೀನ್ ಮರ್ಕಝ್ ಕೋವಿಡ್-19 ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದ್ದಾಗ ಭಾರೀ ಸುದ್ದಿಯಾಗಿತ್ತು. ವೀಸಾ ಷರತ್ತುಗಳ ಉಲ್ಲಂಘನೆ ಹಾಗೂ ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದಕ್ಕೆ ದಿಲ್ಲಿ ಪೊಲೀಸರು ಸುಮಾರು 955 ವಿದೇಶಿಗರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬಹುಪಾಲು ವಿದೇಶಿ ತಬ್ಲೀಗಿ ಜಮಾಅತ್ ಸದಸ್ಯರು ಮನವಿ ಒಪ್ಪಂದ ತೆಗೆದುಕೊಂಡು ತಮ್ಮ ದೇಶಗಳಿಗೆ ಮರಳಿದ್ದರೆ, 44 ಮಂದಿ ದಿಲ್ಲಿಯಲ್ಲಿ ವಿಚಾರಣೆ ಎದುರಿಸಲು ನಿರ್ಧರಿಸಿದ್ದರು. ಇವರ ಪೈಕಿ ಈ ಮೊದಲು 8 ಸದಸ್ಯರುಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷಧಾರಗಳಿರಲಿಲ್ಲ ಎಂದು ಈ ಹಿಂದೆ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು.





