ಮೈಸೂರು ಡಿಸಿಯಾಗಿ ಬಿ.ಶರತ್ ಮರು ನೇಮಕಕ್ಕೆ ಸಿಎಟಿ ಆದೇಶ: ರಾಜ್ಯ ಸರಕಾರಕ್ಕೆ ಹಿನ್ನಡೆ

ರೋಹಿಣಿ ಸಿಂಧೂರಿ- ಬಿ.ಶರತ್
ಬೆಂಗಳೂರು, ಡಿ.15: ಮೈಸೂರು ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ಮರು ನೇಮಕ ಮಾಡುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಸರಕಾರಕ್ಕೆ ಹಿನ್ನಡೆಯುಂಟಾಗಿದೆ.
ಸಿಎಟಿ ಡಿ.22ರ ಒಳಗೆ ಮರುನೇಮಕ ಮಾಡುವಂತೆ ಸರಕಾರಕ್ಕೆ ಸೂಚಿಸುವಂತೆ ಅಡ್ಟಕೇಟ್ ಜನರಲ್ಗೆ ಸೂಚನೆ ನೀಡಿದೆ.
''2020ರ ಆ.28ಕ್ಕೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿದ ತಮ್ಮನ್ನು ಸೂಕ್ತ ಕಾರಣ ನೀಡದೆ ಸೆ.28ಕ್ಕೆ ವರ್ಗಾವಣೆ ಮಾಡಿದೆ. ಏಕಾಏಕಿ ತಮ್ಮನ್ನು ವರ್ಗಾವಣೆ ಮಾಡಿರುವ ಸರಕಾರದ ಆದೇಶ ಕಾನೂನು ಬಾಹಿರ. ಈ ಆದೇಶ ರದ್ದುಗೊಳಿಸಬೇಕು'' ಎಂದು ಕೋರಿ ಐಎಎಸ್ ಅಧಿಕಾರಿ ಬಿ.ಶರತ್ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸಿಎಟಿ ಮಂಗಳವಾರ ತೀರ್ಪು ನೀಡಿದೆ.
ಕಳೆದ ಮೂರು ತಿಂಗಳಿಂದ ಅರ್ಜಿ ವಿಚಾರಣೆಯು ಹಲವು ಬಾರಿ ನಡೆದು ಮುಂದೂಡಲಾಗಿತ್ತು. ಹಲವು ರಾಜಕೀಯ ಮುಖಂಡರು ಈ ವಿಚಾರಣೆ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಿದ್ದರು. ಆದರೆ ಮಂಗಳವಾರ ನಡೆದ ವಿಚಾರಣೆ ಮಹತ್ವದ ತೀರ್ಪು ಹೊರಬಿದ್ದಿದ್ದು, ಬಿ.ಶರತ್ ಡಿಸಿಯಾಗಿ ಮರು ನೇಮಕಗೊಂಡಿದ್ದಾರೆ.





