ಕೃಷಿ ಕಾಯ್ದೆಗಳ ವಿರುದ್ಧ ರೈತರ ನಿಲುವು ಇನ್ನಷ್ಟು ಕಠಿಣ: ಬುಧವಾರ ಚಿಲ್ಲಾ ಗಡಿಯ ಸಂಪೂರ್ಣ ತಡೆಗೆ ಸಜ್ಜು
ಡಿ.20ರಂದು ಶ್ರದ್ಧಾಂಜಲಿ ದಿವಸ್

ಹೊಸದಿಲ್ಲಿ,ಡಿ.15: ನೂತನ ಕೃಷಿ ಕಾನೂನುಗಳ ವಿರುದ್ಧ ತಮ್ಮ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿರುವ ರೈತ ನಾಯಕರು, ಸರಕಾರವು ಈ ಕಾನೂನುಗಳನ್ನು ರದ್ದುಗೊಳಿಸುವಂತೆ ಮಾಡುತ್ತೇವೆ ಎಂದು ತಿಳಿಸಿದರು. ಏನೇ ಆದರೂ ಈ ಹೋರಾಟದಲ್ಲಿ ಗೆಲ್ಲಲೇಬೇಕು ಎಂಬ ದೃಢಸಂಕಲ್ಪದ ಹಂತವನ್ನೀಗ ತಾವು ತಲುಪಿರುವುದಾಗಿ ಅವರು ಒತ್ತಿ ಹೇಳಿದರು.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರದ ಮೇಲೆ ಒತ್ತಡ ತರಲು ಬುಧವಾರ ದಿಲ್ಲಿ-ನೊಯ್ಡಾ ನಡುವಿನ ಚಿಲ್ಲಾ ಗಡಿಯಲ್ಲಿ ಸಂಪೂರ್ಣ ತಡೆಯನ್ನೊಡ್ಡಲು ರೈತರು ನಿರ್ಧರಿಸಿದ್ದಾರೆ.
ಮಂಗಳವಾರ ಇಲ್ಲಿಯ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಜಗಜೀತ ದಲ್ಲೆವಾಲೆ ಅವರು, ‘ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಅದು ಈ ಕಾನೂನುಗಳನ್ನು ರದ್ದುಗೊಳಿಸುವಂತೆ ನಾವು ಮಾಡುತ್ತೇವೆ’ ಎಂದು ಹೇಳಿದರು.
‘ನಾವು ಮಾತುಕತೆಗಳಿಗೆ ವಿಮುಖರಾಗಿಲ್ಲ,ಆದರೆ ಸರಕಾರವು ನಮ್ಮ ಬೇಡಿಕೆಗಳನ್ನು ಆಲಿಸಬೇಕು ಮತ್ತು ದೃಢವಾದ ಪ್ರಸ್ತಾವಗಳೊಡನೆ ಮುಂದೆ ಬರಬೇಕು ’ಎಂದರು.
ಶ್ರದ್ಧಾಂಜಲಿ ದಿವಸ್
ನವೆಂಬರ್ ಕೊನೆಯ ವಾರದಲ್ಲಿ ಪ್ರತಿಭಟನೆ ಆರಂಭಗೊಂಡಾಗಿನಿಂದ ಸರಾಸರಿ ದಿನಕ್ಕೆ ಓರ್ವರಂತೆ ರೈತರು ಸಾವನ್ನಪ್ಪಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಹುತಾತ್ಮರಾಗಿರುವ ಎಲ್ಲ ರೈತರಿಗಾಗಿ ಡಿ.20ರಂದು ದೇಶಾದ್ಯಂತ ಎಲ್ಲ ತಾಲೂಕು ಕೇಂದ್ರಗಳು ಮತ್ತು ಗ್ರಾಮಗಳಲ್ಲಿ ‘ಶ್ರದ್ಧಾಂಜಲಿ ದಿವಸ್’ಅನ್ನು ಏರ್ಪಡಿಸಲಾಗಿದೆ ಎಂದು ಇನ್ನೋರ್ವ ರೈತ ಮುಖಂಡ ರಿಷಿಪಾಲ್ ತಿಳಿಸಿದರು.







