ಚೀನಾ ವಿರುದ್ಧ ಉಯಿಘರ್ ಜನಾಂಗೀಯ ಹತ್ಯೆ ವಿಚಾರಣೆಯಿಲ್ಲ
ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ

ದ ಹೇಗ್ (ನೆದರ್‌ಲ್ಯಾಂಡ್ಸ್), ಡಿ. 15: ಜನಾಂಗೀಯ ಹತ್ಯೆ ಮತ್ತು ಮಾನವತೆ ವಿರುದ್ಧದ ಅಪರಾಧಗಳಿಗಾಗಿ ಚೀನಾದ ವಿರುದ್ಧ ತನಿಖೆ ನಡೆಸುವಂತೆ ಚೀನಾದಿಂದ ಹೊರಗೆ ದೇಶಭ್ರಷ್ಟರಾಗಿ ಜೀವನ ನಡೆಸುತ್ತಿರುವ ಉಯಿಘರ್ ಜನಾಂಗೀಯರು ನೀಡಿರುವ ಕರೆಗಳನ್ನು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಪ್ರಾಸಿಕ್ಯೂಟರ್‌ಗಳು ತಿರಸ್ಕರಿಸಿದ್ದಾರೆ ಎಂದು ಮುಖ್ಯ ಪ್ರಾಸಿಕ್ಯೂಟರ್ ಕಚೇರಿ ಸೋಮವಾರ ವರದಿಯೊಂದರಲ್ಲಿ ಹೇಳಿದೆ.
ಚೀನಾವು 10 ಲಕ್ಷಕ್ಕೂ ಅಧಿಕ ಉಯಿಘರ್ ಜನಾಂಗೀಯರು ಮತ್ತು ಇತರ ಬಹುತೇಕ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಮರು ಶಿಕ್ಷಣ ಶಿಬಿರಗಳಲ್ಲಿ ಕೂಡಿ ಹಾಕುತ್ತಿದೆ ಹಾಗೂ ಮಹಿಳೆಯರನ್ನು ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಿದೆ ಎಂಬುದಾಗಿ ಉಯಿಘರ್‌ಗಳು ಜುಲೈ ತಿಂಗಳಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು ಹಾಗೂ ದೂರಿಗೆ ಪುರಾವೆಯಾಗಿ ಬೃಹತ್ ಪ್ರಮಾಣದಲ್ಲಿ ಕಾಗದಪತ್ರಗಳನ್ನು ಸಲ್ಲಿಸಿದ್ದರು.
ಆದರೆ, ದೂರಲಾದ ಕೃತ್ಯಗಳು ಚೀನಾದಲ್ಲಿ ನಡೆದಿವೆ ಹಾಗೂ ಚೀನಾವು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಒಡಂಬಡಿಕೆಗೆ ಸಹಿ ಹಾಕಿಲ್ಲ ಎಂದು ಪ್ರಾಸಿಕ್ಯೂಟರ್ ಫತೌ ಬೆನ್‌ಸೋಡ ಅವರ ಕಚೇರಿ ಹೇಳಿದೆ. ಹಾಗಾಗಿ, ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.





