ಮದ್ರಾಸ್ ಐಐಟಿಯಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕು: ಎಲ್ಲ ಕಾಲೇಜುಗಳಲ್ಲಿ ಪರಿಶೀಲನೆಗೆ ಆದೇಶ

ಚೆನ್ನೈ,ಡಿ.16: ತಮಿಳುನಾಡಿನ ಮದ್ರಾಸ್ ಐಐಟಿಯಲ್ಲಿ ಸೋಮವಾರದಂದು ಒಟ್ಟು 104 ಮಂದಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೋನ ಸೋಂಕಿಗೆ ತುತ್ತಾಗಿದ್ದರು. ಈ ಕಾರಣದಿಂದಾಗಿ ಸಂಪೂರ್ಣ ಐಐಟಿಯನ್ನು ತಾತ್ಕಾಲಿಕ ಸೀಲ್ ಡೌನ್ ಗೆ ಒಳಪಡಿಸಲಾಗಿತ್ತು. ಇದೀಗ ಒಟ್ಟು ಸೋಂಕಿತರ ಸಂಖ್ಯೆಯು 191ಕ್ಕೆ ಏರಿಕೆಯಾಗಿದ್ದು, ಸೀಲ್ ಡೌನ್ ಅನ್ನು ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.
ಮದ್ರಾಸ್ ಐಐಟಿ ಮಾತ್ರವಲ್ಲದೇ ಅಣ್ಣಾ ಯುನಿವರ್ಸಿಟಿಯಲ್ಲೂ ಕೂಡಾ ಆರು ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿದ್ದು, ತಮಿಳುನಾಡಿನಾದ್ಯಂತ ಇರುವ ಎಲ್ಲ ಕಾಲೇಜು ಹಾಗೂ ಯುನಿವರ್ಸಿಟಿಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಆದೇಶ ಹೊರಡಿಸಿದ್ದಾರೆ.
ಐಐಟಿ ಮದ್ರಾಸ್ ಆಡಳಿತ ಮಂಡಳಿಯು ಕಳೆದ ವಾರವೇ ಮೆಸ್, ಲ್ಯಾಬ್ ಹಾಗೂ ಗ್ರಂಥಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಕ್ಯಾಂಪಸ್ ನಲ್ಲಿ ಕೋವಿಡ್ ಸೋಂಕು ಹರಡಲು ಮೆಸ್ ಅನ್ನು ಮುಖ್ಯ ಕಾರಣವಾಗಿ ಬೆಟ್ಟು ಮಾಡಿ ತೋರಿಸಿತ್ತು. ಈ ಪ್ರಕರಣದ ಬಳಿಕ ತಮಿಳುನಾಡು ಸರಕಾರ ಎಲ್ಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಬೇಕೆಂದು ಆದೇಶಿಸಿದೆ. ಸದ್ಯ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿತ್ಉ, ಆರೋಗ್ಯವು ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.







