ಆಡಳಿತಾರೂಢ ಎಲ್ ಡಿ ಎಫ್ ಗೆ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರಂಭಿಕ ಮುನ್ನಡೆ
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತ ಎಲ್‌ಡಿಎಫ್‌ಗೆ ಮೇಲುಗೈ
ತಿರುವನಂತಪುರ,ಡಿ.16: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಸತ್ವಪರೀಕ್ಷೆ ಎಂದೇ ಎಲ್ಲ ರಾಜಕೀಯ ಪಕ್ಷಗಳು ಪರಿಗಣಿಸಿದ್ದ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಎಣಿಕೆ ಬುಧವಾರ ನಡೆದಿದ್ದು, ಆಡಳಿತಾರೂಢ ಎಡರಂಗ ನೇತೃತ್ವದ ಮೈತ್ರಿಕೂಟವು ಭಾರೀ ಮೇಲುಗೈ ಸಾಧಿಸಿದೆ. ಭ್ರಷ್ಟಾಚಾರ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಆಡಳಿತ ಮೈತ್ರಿಕೂಟವು ಹೆಚ್ಚಿನ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತನ್ನ ಪಾರಮ್ಯವನ್ನು ಮೆರೆದಿದೆ.
ಸಂಜೆ ಏಳು ಗಂಟೆಯವರೆಗೆ ಲಭ್ಯ ವರದಿಗಳಂತೆ 945 ಗ್ರಾಮ ಪಂಚಾಯತ್‌ಗಳ ಪೈಕಿ 520ರಲ್ಲಿ ಎಲ್‌ಡಿಎಫ್ ಮತ್ತು 371ರಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆಯನ್ನು ಕಾಯ್ದುಕೊಂಡಿವೆ.
ಎಲ್‌ಡಿಎಫ್ 14 ಜಿಲ್ಲಾಪಂಚಾಯತ್‌ಗಳ ಪೈಕಿ 10ನ್ನು ಗೆದ್ದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಅದು ಏಳು ಜಿಲ್ಲಾ ಪಂಚಾಯತ್‌ಗಳನ್ನು ಗೆದ್ದುಕೊಂಡಿತ್ತು. 152 ಬ್ಲಾಕ್ ಪಂಚಾಯತ್ ಗಳ ಪೈಕಿ 108ರಲ್ಲಿಯೂ ಅದು ವಿಜಯವನ್ನು ಸಾಧಿಸಿದೆ. ಯುಡಿಎಫ್ ನಾಲ್ಕು ಜಿಲ್ಲಾ ಪಂಚಾಯತ್‌ಗಳಲ್ಲಿ ಮತ್ತು 86 ನಗರಸಭೆಗಳ ಪೈಕಿ 45ರಲ್ಲಿ ಮುನ್ನಡೆಯಲ್ಲಿದ್ದರೆ,ಎಲ್‌ಡಿಎಫ್ 35 ನಗರಸಭೆಗಳ ಮೇಲೆ ಹಿಡಿತ ಸಾಧಿಸಿದೆ.
ತಿರುವನಂತಪುರದಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರೂ ಬಿಜೆಪಿ ನಿರೀಕ್ಷಿತ ಸಾಧನೆ ಮಾಡುವಲ್ಲಿ ವಿಫಲಗೊಂಡಿದೆ. ತಿರುವನಂತಪುರದ 100 ವಾರ್ಡ್‌ಗಳ ಪೈಕಿ 51ರಲ್ಲಿ ಗೆಲುವು ಸಾಧಿಸಿರುವ ಎಲ್‌ಡಿಎಫ್ 2015ಕ್ಕೆ ಹೋಲಿಸಿದರೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 34 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಯುಡಿಎಫ್ ಮೂರನೇ ಸ್ಥಾನದಲ್ಲಿದೆ. 2015ರ ಚುನಾವಣೆಯಲ್ಲಿ ಎಲ್‌ಡಿಎಫ್ 32 ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟ 34 ವಾರ್ಡ್‌ಗಳನ್ನು ಗೆದ್ದಿದ್ದವು.
941 ಗ್ರಾ.ಪಂಚಾಯತ್‌ಗಳು,152 ಬ್ಲಾಕ್ ಪಂಚಾಯತ್‌ಗಳು, 14 ಜಿಲ್ಲಾ ಪಂಚಾಯತ್‌ಗಳು ,86 ನಗರಸಭೆಗಳು ಮತ್ತು ಆರು ಮಹಾನಗರಪಾಲಿಕೆಗಳಿಗೆ ಈ ತಿಂಗಳ ಪೂರ್ವಾರ್ಧದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಬಿಜೆಪಿ ಬುಧವಾರ ಕೆಲವು ಗಮನಾರ್ಹ ಗಳಿಕೆಗಳನ್ನು ದಾಖಲಿಸಿದೆ. ಕಣ್ಣೂರು ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೋರ್ವರು ಗೆಲುವು ಕಂಡಿದ್ದಾರೆ. ಗ್ರಾಮ ಪಂಚಾಯತ್‌ಗಳು ಮತ್ತು ನಗರಸಭೆಗಳಲ್ಲಿ ತನ್ನ ಮತಗಳಿಕೆಯನ್ನೂ ಅದು ಸ್ವಲ್ಪ ಮಟ್ಟಿಗೆ ಹೆಚ್ಚಿಸಿಕೊಂಡಿದೆ.
ತ್ರಿಶ್ಶೂರು ಮಹಾನಗರ ಪಾಲಿಕೆ ಮೇಯರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಪಕ್ಷದ ವಕ್ತಾರ ಯುಡಿಎಫ್ ಎದುರಾಳಿಯಿಂದ ಸೋಲನ್ನುಂಡಿದ್ದಾರೆ. ಈವರೆಗೆ ಮೇಯರ್ ಹುದ್ದೆ ಬಿಜೆಪಿ ವಶದಲ್ಲಿತ್ತು.
ಎಲ್‌ಡಿಎಫ್ ಭಾರೀ ವಿಜಯದತ್ತ ಸಾಗುತ್ತಿದೆ ಎಂದು ಕೇರಳದ ವಿತ್ತಸಚಿವ ಟಿ.ಎಂ.ಥಾಮಸ್ ಇಸಾಕ್ ಟ್ವೀಟಿಸಿದ್ದಾರೆ.
‘ನಾವು ಒಳ್ಳೆಯ ಸಾಧನೆಯನ್ನೇ ಮಾಡಿದ್ದೇವೆ. ಸರಕಾರದ ಭ್ರಷ್ಟಾಚಾರಗಳ ಹಿನ್ನೆಲೆಯಲ್ಲಿ ಇದಕ್ಕಿಂತ ಉತ್ತಮ ಫಲಿತಾಂಶವನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಂಪೂರ್ಣ ರಾಜಕೀಯ ಆಧರಿತವಲ್ಲ ’ಎಂದು ಕಾಂಗ್ರೆಸ್ ನಾಯಕ ರಮೇಶ ಚೆನ್ನಿತಲ ಹೇಳಿದರು.







