ಉತ್ತರ ಪ್ರದೇಶ: ಕತ್ತೆ ಸೆಗಣಿ, ಆ್ಯಸಿಡ್ ಬಳಸಿ ತಯಾರಿಸುತ್ತಿದ್ದ ಮಸಾಲೆ ವಸ್ತುಗಳು ಪೊಲೀಸ್ ವಶ!
ಹಿಂದೂ ಯುವವಾಹಿನಿ ಮುಖಂಡನ ಒಡೆತನದಲ್ಲಿದ್ದ ಫ್ಯಾಕ್ಟರಿ

ಸಾಂದರ್ಭಿಕ ಚಿತ್ರ
ಹತ್ರಾಸ್,ಡಿ.16: ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ಕತ್ತೆ ಸೆಗಣಿ, ಆ್ಯಸಿಡ್ ಮತ್ತು ಒಣ ಹುಲ್ಲು ಮುಂತಾದ ಅಪಾಯಕಾರಿ ವಸ್ತುಗಳನ್ನು ಬೆರೆಸಿ ತಯಾರಿಸಲಾಗುತ್ತಿದ್ದ ಮಸಾಲೆ ಪದಾರ್ಥಗಳ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ 300 ಕೆ.ಜಿ ಗೂ ಹೆಚ್ಚು ಕಲಬೆರಕೆ ಉತ್ಪನ್ನಗಳನ್ನು ವಶಪಡಿಸಲಾಗಿದೆ ಎಂದು www.timesofindia.com ವರದಿ ತಿಳಿಸಿದೆ.
ಈ ಫ್ಯಾಕ್ಟರಿಯು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಾಪಿಸಿದ್ದ ಹಿಂದೂ ಯುವ ವಾಹಿನಿಯ ಮುಖಂಡ ಅನೂಪ್ ವರ್ಷ್ನೀ ಎಂಬಾತನ ಮಾಲಕತ್ವಕ್ಕೆ ಒಳಪಟ್ಟಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹತ್ರಾಸ್ ನ ನವೀಪುರ್ ಎಂಬ ಪ್ರದೇಶದಲ್ಲಿರುವ ಈ ಫ್ಯಾಕ್ಟರಿಯಲ್ಲಿ ಹಲವಾರು ಕಲಬೆರಕೆ ಉತ್ಪನ್ನಗಳು ಪತ್ತೆಯಾಗಿದೆ. ದೈನಂದಿನ ಬಳಕೆಯ ವಸ್ತುಗಳಾದ ಅರಿಶಿಣ ಹುಡಿ, ಮೆಣಸಿನ ಹುಡಿ, ಗರಮ್ ಮಸಾಲಾ ಹುಡಿ ಹಾಗೂ ಇನ್ನಿತರ ಮಸಾಲ ಪದಾರ್ಥಗಳಲ್ಲಿ ಕತ್ತೆಯ ಸೆಗಣಿ, ಅಪಾಯಕಾರಿ ಆ್ಯಸಿಡ್ ಹಾಗೂ ಒಣಹುಲ್ಲುಗಳನ್ನು ಬೆರೆಸುತ್ತಿರುವುದು ದಾಳಿಯ ವೇಳೆ ಗಮನಕ್ಕೆ ಬಂದಿದೆ ಎಂದು www.timesofindia.com ವರದಿ ಮಾಡಿದೆ.
ಒಟ್ಟು 27 ಉತ್ಪನ್ನಗಳನ್ನು ಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ಕಳುಗಹಿಸಲಾಗಿದ್ದು, ಫ್ಯಾಕ್ಟರಿಯ ಮಾಲಕನನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.







