ಪಂದಳಂ ಪುರಸಭೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ

ತಿರುವನಂತಪುರ: ಕೇರಳದಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪಂದಳಂ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2015ರಿಂದ ಎಲ್ ಡಿ ಎಫ್ ನ ನಿಯಂತ್ರಣದಲ್ಲಿದ್ದ ಪುರಸಭೆಯನ್ನು ಬಿಜೆಪಿ ಕಸಿದುಕೊಂಡಿದೆ.
ಒಟ್ಟು 33 ಸ್ಥಾನಗಳ ಪೈಕಿ ಬಿಜೆಪಿ 17ರಲ್ಲಿ ಜಯ ಸಾಧಿಸಿದೆ.
ಶಬರಿಮಲೆ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿರುವ ಹಿಂದಿನ ರಾಜಮನೆತನದ ನೆಲೆಯಾದ ಪಂದಳಂನಲ್ಲಿ 2018ರಲ್ಲಿ ಶಬರಿ ಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸುವ ಅಭಿಯಾನದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಿರಲಿಲ್ಲ. ಈಗ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಲಾಭ ಪಡೆದಿರುವುದು ಗೋಚರಿಸುತ್ತಿದೆ.
ಪ್ರಸಿದ್ದ ಶಬರಿಮಲೆ ದೇವಸ್ಥಾನವಿರುವ ಪತ್ತಣಂತಿಟ್ಟ ಜಿಲ್ಲೆಯಲ್ಲಿರುವ ಪಂದಳಂ ಪುರಸಭೆಯಲ್ಲಿನ ಗೆಲುವು ಬಿಜೆಪಿಗೆ ಮಹತ್ವದ್ದಾಗಿದೆ. 2015ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಕೇವಲ 7ರಲ್ಲಿ ಜಯ ಸಾಧಿಸಿತ್ತು.
ಪಾಲಕ್ಕಾಡ್ ಪುರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. 52 ಸ್ಥಾನಗಳ ಪೈಕಿ 28ರಲ್ಲಿ ಜಯ ಸಾಧಿಸಿದೆ. 2015ರಲ್ಲಿ 24 ಸ್ಥಾನಗಳಲ್ಲಿ ಜಯ ಸಾಧಿಸಿ ಬಹುಮತಕ್ಕೆ ಕೊರತೆ ಎದುರಿಸಿತ್ತು.





