ಕ್ಯಾನ್ಸರ್ ರೋಗಿಗಳಿಗೆ ಕೇಶದಾನ : ವಿದ್ಯಾರ್ಥಿಗಳಿಂದ ವಿಶೇಷ ಅಭಿಯಾನ
ಮಂಗಳೂರು, ಡಿ.16: ಕ್ಯಾನ್ಸರ್ ರೋಗದಿಂದ ತಮ್ಮ ಕೇಶವನ್ನು ಕಳೆದುಕೊಂಡ ರೋಗಿಗಳಿಗೆ ಕೇಶದಾನದ ಮೂಲಕ ವಿಗ್ ತಯಾರಿಸಿ ನೀಡುವ ಕಾರ್ಯಕ್ಕೆ ಪುತ್ತೂರಿನ ವಿದ್ಯಾರ್ಥಿಗಳು ಅಭಿಯಾನವನ್ನು ಕೈಗೊಂಡಿದ್ದಾರೆ.
ಪುತ್ತೂರಿನ 9 ವಿದ್ಯಾರ್ಥಿಗಳಿಂದ ಈ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದ್ದು ಡಿ. 20ರಂದು ಈ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಕಾರ್ಯಕ್ರಮದ ರುವಾರಿ 10ನೆ ತರಗತಿಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
‘‘ನಾನು 5ನೆ ತರಗತಿಯಲ್ಲಿದ್ದಾಗ ನನ್ನ ಪ್ರೀತಿಯ ಟೀಚರ್ ಕ್ಯಾನ್ಸರ್‌ನಿಂದ ಕಿಮೋ ತೆರಪಿಗೊಳಗಾಗಿ ತಲೆಗೆ ಸ್ಕಾರ್ಫ್ ಧರಿಸಿಕೊಂಡು ಬಂದಾಗ ಕೇಶದಾನಕ್ಕೆ ಪ್ರೇರಣೆ ನೀಡಿತು. ಲಾಕ್‌ಡೌನ್ ಸಂದರ್ಭದಲ್ಲಿ ತನ್ನ 10ರಿಂದ 12 ಇಂಚು ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಿ ಉಚಿತವಾಗಿ ಒದಗಿಸುವ ಸಂಸ್ಥೆಗೆ ದಾನ ಮಾಡಿದ್ದು, ಇದೀಗ ಸೀಡ್ಸ್ ಆಫ್ ಹೋಪ್ ತಂಡದ ಮೂಲಕ ದಾನಿಗಳಿಂದ ಕೂದಲು ಸಂಗ್ರಹಿಸಿ ವಿಗ್ ತಯಾರಿಸಿ ನಗರದ ಕ್ಯಾನ್ಸರ್ ರೋಗಿಗಳಿಗೆ ನೀಡಲು ಮುಂದಾಗಿದ್ದೇವೆ’’ ಎಂದು ಪುತ್ತೂರಿನ ಆಂಗ್ಲ ಮಾಧ್ಯಮ ಶಾಲೆಯ 10ನೆ ತರಗತಿಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ತಿಳಿಸಿದರು.
ತಂಡದ ಈ ಕಾರ್ಯಕ್ಕೆ ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಈಸ್ಟ್, ರೋಟರಿ ಪುತ್ತೂರು ಸಿಟಿ, ಜೇಸಿಐ ಪುತ್ತೂರು, ಜೇಸಿರೆಟ್ ಪುತ್ತೂರು, ಇನ್ನರ್‌ವೀಲ್ ಪುತ್ತೂರು, ಲೇಡೀಸ್ ಬ್ಯೂಟಿ ಅಸೋಸಿಯೇಶನ್, ಹೇರ್ ಕ್ರೌನ್ ಸಂಸ್ಥೆಗಳು ಕೈ ಜೋಡಿಸಿವೆ. ಈಗಾಗಲೇ 56 ಮಂದಿ ಕೂದಲು ನೀಡಲು ನೋಂದಾಯಿಸಿಕೊಂಡಿದ್ದು, ಸಂಗ್ರಹವಾಗುವ ಕೂದಲನ್ನು ತಮಿಳುನಾಡಿನ ಹೇರ್‌ಕ್ರೌನ್‌ಗೆ ರವಾನಿಸಿ ವಿಗ್ ತಯಾರಿಸಿ ಅರ್ಹ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವುದು. ಕಾರ್ಯಕ್ರಮಕ್ಕೆ ಬಂದು ಕೂದಲು ಕತ್ತರಿಸಲು ಅನಾನುಕೂಲವಾಗಿದ್ದಲ್ಲಿ ಮನೆಯಲ್ಲಿಯೇ ಕೂದಲು ಕತ್ತರಿಸಿ ಕಳುಹಿಸಬಹುದು. ಕನಿಷ್ಠ 8 ಇಂಚಿನಿಂದ ಕೂದಲು ದಾನ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9632567916ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ಕೌಶಲ್ ಎಸ್.ವೈ., ಕನ್ಯ ಸಚಿನ್ ಶೆಟ್ಟಿ, ನೇಹ ಭಟ್, ಅಕ್ಷಯ ಪಾರ್ವತಿ ಸರೋಳಿ, ಸಮರ್ರಾಮ ಮುಳಿಯ ಉಪಸ್ಥಿತರಿದ್ದರು.







