ಮೋದಿ, ಶಾ ಹೆಸರೇಳಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ: ಲಕ್ಷಾಂತರ ರೂ. ನಗದು ಜಪ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.16: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹೀಗೆ ಬಿಜೆಪಿ ನಾಯಕರೆಲ್ಲಾ ನನಗೆ ಆಪ್ತರು. ಏನೇ ಕೆಲಸ ಆಗಬೇಕಾದರೆ ಹೇಳಿ, ಕ್ಷಣಮಾತ್ರದಲ್ಲಿ ಮಾಡುವೆ ಎಂದು ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಯೋರ್ವ ಸಿಸಿಬಿ ತನಿಖಾಧಿಕಾರಿಗಳ ಖೆಡ್ಡಾಕ್ಕೆ ಬಿದ್ದಿದ್ದಾನೆ.
ಆರೆಸ್ಸೆಸ್ ನಾಯಕರ ಮತ್ತು ಬಿಜೆಪಿ ಮುಖಂಡರ ಹೆಸರೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ಇಲ್ಲಿನ ನಾಗರಬಾವಿಯಲ್ಲಿ ನೆಲೆಸಿದ್ದ ಯುವರಾಜ್ ಯಾನೆ ಸ್ವಾಮೀಜಿ ಎಂಬಾತನ ಮನೆ ಮೇಲೆ ಸಿಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು.
ಕೆಎಸ್ಸಾರ್ಟಿಸಿ ನಿಗಮ ಅಧ್ಯಕ್ಷ ಸ್ಥಾನದ ಮೇಲೆ ಒಲವು ಹೊಂದಿದ್ದ ಉದ್ಯಮಿ ಸುಧೀಂದ್ರ ರೆಡ್ಡಿ ಎಂಬವರು ಆರೋಪಿ ಯುವರಾಜ್ನನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಾವು ನನಗೆ ಹಣ ನೀಡಿದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ, ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿಸುತ್ತೇನೆ ಎಂದಿದ್ದಾನೆ. ಇದನ್ನು ನಂಬಿ ಉದ್ಯಮಿ ಹಣವನ್ನು ಯುವರಾಜ್ಗೆ ತಲುಪಿಸಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಬೇರೆ ವ್ಯಕ್ತಿ ಆಯ್ಕೆಯಾದ ಕಾರಣ, ಸುಧೀಂದ್ರ ರೆಡ್ಡಿ ಆರೋಪಿಯನ್ನು ಸಂಪರ್ಕಿಸಿದಾಗ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾನೆ. ಬಳಿಕ ವಂಚನೆ ಮಾಡಿರುವುದು ಸಾಬೀತಾದ ಹಿನ್ನೆಲೆ ಸಿಸಿಬಿಗೆ ದೂರು ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.
ದೂರಿನ್ವಯ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಆರೋಪಿ ಯುವರಾಜ್ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಹಲವು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಿ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆಗೊಳಪಡಿಸಲಾಗಿದೆ.
ಇನ್ನು, ದಾಳಿ ವೇಳೆ ಆರೋಪಿ ಮನೆಯಲ್ಲಿ ಕೆಲ ದಾಖಲೆ ಪತ್ರಗಳು, 26 ಲಕ್ಷ ರೂ.ನಗದು, 90 ಕೋಟಿ ರೂ. ಉಲ್ಲೇಖವಿರುವ ವಿವಿಧ ಬ್ಯಾಂಕಿನ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಚಾಲಕನಿಗೂ ಮೋಸ?
ತನ್ನ ಕಾರು ಚಾಲಕ ಉಮೇಶ್ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದಿದ್ದ ಆರೋಪಿ ಯುವರಾಜ್, ಚಾಲಕನಿಗೆ ಮಾಹಿತಿ ಇಲ್ಲದಂತೆ ಚೆಕ್ಗಳ ಮೇಲೆ ಸಹಿ ಪಡೆದುಕೊಂಡು, ಕೋಟ್ಯಂತರ ರೂಪಾಯಿ ವಾಹಿವಾಟು ನಡೆಸುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.







