ರೈತರ ಹೋರಾಟ ಬೆಂಬಲಿಸಿ ಬೆಂಗಳೂರು ಕುಸ್ತಿ ಪಟುಗಳಿಂದ ಪ್ರಶಸ್ತಿ ವಾಪಸ್
-ಮಂಜುನಾಥ ದಾಸನಪುರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.16: ಕೇಂದ್ರ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಹೊಸದೆಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಅಂತರ್ರಾಷ್ಟ್ರೀಯ ಕುಸ್ತಿ ತರಬೇತುದಾರ ಹಾಗೂ ನಿವೃತ್ತ ಯೋಧ ಎಂ.ಆರ್.ಶರ್ಮಾ ನೇತೃತ್ವದಲ್ಲಿ ಬೆಂಗಳೂರಿನ ಕುಸ್ತಿ ಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ.
ನಿವೃತ್ತ ಯೋಧ ಎಂ.ಆರ್.ಶರ್ಮಾರಿಗೆ ಬಂದಿದ್ದ ಜನರಲ್ ಕಾರ್ಯಪ್ಪ 1974 ಪ್ರಶಸ್ತಿ, 1968 ಇಂಡೋ ಪಾಕಿಸ್ತಾನ್ ಅವಾರ್ಡ್ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದು, ಇವತ್ತು ನನ್ನನ್ನೂ ಒಳಗೊಂಡಂತೆ ಇಡೀ ದೇಶದ ಜನತೆ ರೈತರು ಬೆಳೆದ ಅನ್ನವನ್ನು ತಿಂದು ಬದುಕುತ್ತಿದ್ದೇವೆ. ಅವರು ದುಡಿದು ನಮಗೆ ನೀಡಿದ ಆಹಾರ ಪದಾರ್ಥಗಳನ್ನು ತಿದ್ದು, ನಾವು ತಮ್ಮದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದೇವೆ. ಈಗ ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಇಡೀ ದೇಶದ ರೈತರು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಮಳೆ, ಚಳಿಯೆನ್ನದೆ ರಸ್ತೆಯಲ್ಲಿಯೇ ಮಲಗಿ ಕೇಂದ್ರ ಸರಕಾರ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಕೇಂದ್ರ ಸರಕಾರ ಮಾತ್ರ ರೈತರ ಹೋರಾಟವನ್ನು ಇಬ್ಭಾಗ ಮಾಡಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇವತ್ತು ರೈತ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವೆಲ್ಲರೂ ರೈತರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಕೇಂದ್ರ ಸರಕಾರಕ್ಕೆ ತಮ್ಮ ಕಾಯ್ದೆಗಳು ರೈತ ಪರವಾಗಿದ್ದರೆ, ಅದನ್ನು ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಬೇಕಾಗಿತ್ತು. ಅದನ್ನು ಬಿಟ್ಟು ರೈತರ ಮೇಲೆ ಜಲಫಿರಂಗಿ, ಲಾಠಿ ಚಾರ್ಜ್, ಆಶ್ರುವಾಯು ಮಾಡುವುದರ ಅವಶ್ಯಕತೆ ಏನಿತ್ತು ಎಂದು ಕುಸ್ತಿ ಪಟುಗಳು ಪ್ರಶ್ನಿಸಿದ್ದಾರೆ.
ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈತರು ತಮ್ಮ ಕುಟುಂಬ ಸಮೇತವಾಗಿ ತಮ್ಮ ಜೀವಗಳನ್ನು ಲೆಕ್ಕಿಸದೆ ರಸ್ತೆಗೆ ಬಂದು ಹೋರಾಟ ಮಾಡುತ್ತಿದ್ದಾರೆ. ಇದರಲ್ಲಿ ಯಾವ ಸ್ವಾರ್ಥ ಇದೆ? ಕೇಂದ್ರ ಸರಕಾರ ಬಲ ಪ್ರಯೋಗದ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸ್ವಾರ್ಥವಲ್ಲವೇ? ಈ ಎರಡು ಅಂಶಗಳು ನಮ್ಮ ಕಣ್ಣು ಮುಂದೆ ಇರುವಾಗ ನಾವು ಯಾವ ಕಡೆ ನಿಲ್ಲಬೇಕೆಂದು ಜನತೆಯ ಸಾಮಾನ್ಯ ಜ್ಞಾನಕ್ಕೆ ಬಿಟ್ಟ ವಿಷಯವೆಂದು ಕುಸ್ತಿಪಟು ಫಾರೂಖ್ ತಿಳಿಸಿದ್ದಾರೆ.
ಈ ವೇಳೆ ಅಂತರ್ರಾಷ್ಟ್ರೀಯ ಕುಸ್ತಿಪಟುಗಳಾದ ಮಹೇಶ್ ದುಕ್ರೆ, ಅಶ್ರಫ್, ರಮೇಶ್, ವೆಂಕಟೇಶ್, ಶ್ರೀನಿವಾಸ್ಗೌಡ, ಶರಣ್ ಗೌಡ, ಅಜಯ್ ಕುಮಾರ್, ಬಾಕ್ಸರ್ ಕಿಶನ್, ಅನಂತ್ ಕುಮಾರ್, ತರಬೇತಿದಾರ ಶಂಕರ್ ಮತ್ತಿತರರು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ.
ಕೇಂದ್ರ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಬೆಂಗಳೂರಿನ ಕುಸ್ತಿ ಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ. ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಕುಸ್ತಿಪಟುಗಳಿಂದ ಪ್ರಶಸ್ತಿ ವಾಪಸ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಆ ಮೂಲಕ ನಮ್ಮ ರೈತ ಸಮುದಾಯಕ್ಕೆ ನೈತಿಕ ಬೆಂಬಲ ನೀಡುತ್ತೇವೆ.
-ಎಂ.ಆರ್.ಶರ್ಮಾ, ನಿವೃತ್ತ ಯೋಧ







