ಹಲವು ತಿಂಳುಗಳಿಂದ ಪಾವತಿಯಾಗದ ವೇತನ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳಿಂದ ಮುಷ್ಕರ

ಉಡುಪಿ, ಡಿ.16: ಹಲವು ತಿಂಗಳುಗಳಿಂದ ವೇತನ ಪಾವತಿಸದಿರುವುದನ್ನು ವಿರೋಧಿಸಿ ಉಡುಪಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳು ಇಂದು ಆಸ್ಪತ್ರೆಯ ಎದುರು ಮುಷ್ಕರ ನಡೆಸಿದರು.
ಆಸ್ಪತ್ರೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಒಟ್ಟು 60 ಮಂದಿ ಸ್ವಚ್ಛತಾ ಸಿಬ್ಬಂದಿಗಳು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿತ್ತಿದ್ದು, ಅದರಲ್ಲಿ ಕೆಲವು ಮಂದಿ ವೇತನ ಪಾವತಿಸದ ಕಾರಣಕ್ಕೆ ಕೆಲಸ ಬಿಟ್ಟು ಹೋಗಿದ್ದರೆ, ಇನ್ನು ಕೆಲವರನ್ನು ಮುಷ್ಕರ ಮಾಡಿದಕ್ಕೆ ಕೆಲಸದಿಂದ ವಜಾ ಮಾಡ ಲಾಗಿತ್ತು.
ಇದೀಗ 26 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರೆಲ್ಲರು ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಆಸ್ಪತ್ರೆಯ ಮುಂದೆ ಧರಣಿ ನಡೆಸುತ್ತಿ ದ್ದಾರೆ. ವೇತನ ಪಾವತಿಯಾಗುವವರೆಗೆ ಅಹೋರಾತ್ರಿ ಹೋರಾಟ ಮುಂದುವರೆಸ ಲಾಗುವುದು ಎಂದು ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದಾರೆ.
‘ಈವರೆಗೆ ಮೂರು ಹೊರಗುತ್ತಿಗೆ ಕಂಪೆನಿಯನ್ನು ನಮಗೆ ಮಾಹಿತಿ ನೀಡದೆ ಬದಲಾಯಿಸಲಾಗಿದೆ. ಹಿಂದಿನವರು ಬಾಕಿ ಇಟ್ಟ ಸಂಬಂಳವನ್ನು ಹೊಸ ಕಂಪೆನಿ ಯವರು ಪಾವತಿಸಲು ಒಪ್ಪುತ್ತಿಲ್ಲ. ಇದೀಗ ಕಳೆದ ಫೆಬ್ರವರಿಯಿಂದ ಪಿಎಂಎಸ್ ಎಂಬ ಕಂಪೆನಿಯಡಿಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದಾರೆ’ ಎಂದು ಸಿಬ್ಬಂದಿ ಶೋಭಾ ದೂರಿದರು.
12500 ರೂ. ವೇತನ ನೀಡುವುದಾಗಿ ಹೇಳಿ ದ್ದರೂ 8500ರೂ. ಮಾತ್ರ ನೀಡುತ್ತಿದ್ದಾರೆ. ಇವರು ಮೊದಲ ತಿಂಗಳು ಮಾತ್ರ ಸರಿಯಾದ ಸಂಬಳವನ್ನು ಪಾವತಿಸಿದ್ದಾರೆ. ಅದರ ನಂತರ ಅರ್ಧ ಸಂಬಳ ಮತ್ತು ಕೆಲವು ತಿಂಗಳು ಸಂಬಳವೇ ಪಾವತಿಸಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ನಮಗೆ ನಯಾ ಪೈಸೆ ವೇತನ ನೀಡಿಲ್ಲ’ ಎಂದು ಅವರು ಆರೋಪಿಸಿದರು.
ಎಪ್ರಿಲ್ ತಿಂಗಳು ಪೂರ್ತಿ ಹೆಚ್ಚುವರಿ ಸಮಯ ಕೆಲಸ ನಿರ್ವಹಿಸಿದರೂ ಅದಕ್ಕೆ ವೇತನ ಪಾವತಿಸಿಲ್ಲ. ಪ್ರತಿ ದಿನ 9ಗಂಟೆಗಳ ಕಾಲ ನಮ್ಮನ್ನು ದುಡಿಸಿ ಕೊಳ್ಳುತ್ತಾರೆ. ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕೈದು ಮಂದಿ ಯುವಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇದೀಗ ಅವರು ಮಾಡುತ್ತಿದ್ದ ಕೆಲಸವನ್ನು ಮಹಿಳೆಯ ರಿಂದ ಮಾಡಿಸುತ್ತಿದ್ದಾರೆ ಎಂದು ಅವರು ದೂರಿದರು.







