ಕೃಷಿ ಮಸೂದೆ: ಕೇಂದ್ರದ ಪ್ರಸ್ತಾವವನ್ನು ಅಧಿಕೃತವಾಗಿ ತಿರಸ್ಕರಿಸಿದ ರೈತರು

ಹೊಸದಿಲ್ಲಿ,ಡಿ.16: ನೂತನ ಕೃಷಿ ಮಸೂದೆಗಳಿಗೆ ತಾನು ತರಲು ಸಿದ್ಧವಿರುವ ತಿದ್ದುಪಡಿಗಳ ಕುರಿತು ನರೇಂದ್ರ ಮೋದಿ ಸರಕಾರದ ಡಿ.9ರ ಲಿಖಿತ ಪ್ರಸ್ತಾವವನ್ನು ಪ್ರತಿಭಟನಾನಿರತ ರೈತರ ಗುಂಪುಗಳನ್ನು ಪ್ರತಿನಿಧಿಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಅಧಿಕೃತವಾಗಿ ತಿರಸ್ಕರಿಸಿದೆ.
‘ನಿಮ್ಮ ಡಿ.9ರ ಪ್ರಸ್ತಾವ ಮತ್ತು ಪತ್ರದ ಕುರಿತು ಅದೇ ದಿನ ರೈತ ಒಕ್ಕೂಟಗಳು ಜಂಟಿ ಸಭೆ ನಡೆಸಿ ಚರ್ಚಿಸಿದ್ದು, ಅದು ಡಿ.5ರಂದು ಸರಕಾರದ ಪ್ರತಿನಿಧಿಗಳು ಮೌಖಿಕವಾಗಿ ನಮ್ಮ ಮುಂದಿರಿಸಿದ್ದ ಪ್ರಸ್ತಾವದ ಲಿಖಿತ ರೂಪವಾಗಿರುವುದರಿಂದ ಅದನ್ನು ಸಭೆಯು ತಿರಸ್ಕರಿಸಿದೆ ’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ದರ್ಶನ್ ಪಾಲ್ ಅವರು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಲಾಗಿದೆ.
ರೈತರ ಆಂದೋಲನಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನಗಳನ್ನು ಕೈಬಿಡುವಂತೆ ಮತ್ತು ಇತರ ರೈತ ಸಂಘಟನೆಗಳೊಂದಿಗೆ ಸಮಾನಾಂತರ ಮಾತುಕತೆಗಳನ್ನು ನಿಲ್ಲಿಸುವಂತೆಯೂ ಪಾಲ್ ಸರಕಾರಕ್ಕೆ ಸೂಚಿಸಿದ್ದಾರೆ.
ರೈತ ಸಂಘಟನೆಗಳಿಗೆ ಕಳುಹಿಸಿರುವ ಪ್ರಸ್ತಾವದ ಕುರಿತು ಅವುಗಳಿಂದ ಉತ್ತರವನ್ನು ಕೇಂದ್ರವು ನಿರೀಕ್ಷಿಸುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಳೆದ ವಾರ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಪ್ರತಿಭಟನಾನಿರತ ರೈತರು ಅದೇ ದಿನ ಸುದ್ದಿಗೋಷ್ಠಿಯಲ್ಲಿ ಸದ್ರಿ ಪ್ರಸ್ತಾವವನ್ನು ತಿರಸ್ಕರಿಸಿದ್ದರು.
ಮೂರು ಕೃಷಿ ಕಾನೂನುಗಳ ಪೈಕಿ ಎರಡಕ್ಕೆ ಏಳು ತಿದ್ದುಪಡಿಗಳನ್ನು ತರಲು ತಾನು ಸಿದ್ಧವಿದ್ದೇನೆ ಎಂದು ಪ್ರಸ್ತಾವದಲ್ಲಿ ತಿಳಿಸಿದ್ದ ಕೇಂದ್ರವು,ಈಗಿರುವ ವಿದ್ಯುತ್ ಬಿಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿತ್ತು. ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಕೈಬಿಡಬೇಕು ಎನ್ನುವುದು ರೈತರ ಬೇಡಿಕೆಗಳಲ್ಲೊಂದಾಗಿದೆ.
ಕನಿಷ್ಠ ಬೆಂಬಲ ಬೆಲೆಗಳಲ್ಲಿ ಸರಕಾರದಿಂದ ರೈತರ ಉತ್ಪನ್ನಗಳ ಖರೀದಿ ಮುಂದುವರಿಯುತ್ತದೆ ಎಂಬ ಲಿಖಿತ ಭರವಸೆಯನ್ನೂ ಪ್ರಸ್ತಾವವು ಒಳಗೊಂಡಿತ್ತು. ಮಂಡಿಗಳ ಹೊರಗೆ ವ್ಯವಹರಿಸುತ್ತಿರುವ ವ್ಯಾಪಾರಿಗಳ ನೋಂದಣಿಗೆ ರಾಜ್ಯ ಸರಕಾರಗಳಿಗೆ ಅವಕಾಶ ಕಲ್ಪಿಸಲು ತಿದ್ದುಪಡಿಯೊಂದನ್ನೂ ಸೂಚಿಸಿದ್ದ ಪ್ರಸ್ತಾವವು, ರಾಜ್ಯಗಳು ಅವರಿಗೆ ತೆರಿಗೆಯನ್ನು ವಿಧಿಸಬಹುದು ಎಂದೂ ಹೇಳಿತ್ತು. ಆದರೆ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ರೈತರ ಮುಖ್ಯ ಬೇಡಿಕೆಯ ಬಗ್ಗೆ ಅದು ಚಕಾರವೆತ್ತಿರಲಿಲ್ಲ.







