ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ದೊರೆಯುವವರೆಗೂ ಹೋರಾಟ: ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಡಿ.16: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ನೀಡಬೇಕೆಂಬ ಬೇಡಿಕೆ ಕುರಿತು ಕೇಂದ್ರದ ನಾಯಕರನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದೇವೆ. ಎಸ್ಟಿ ಮೀಸಲು ಪಡೆಯಲು ನಡೆಯುತ್ತಿರುವ ಹೋರಾಟವು ರಾಜ್ಯದಲ್ಲಿ ಜಾತ್ರೆಯಂತೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಆಗ್ರಹಿಸಲು ಬೆಂಗಳೂರು ವಿಭಾಗಮಟ್ಟದ ಸಮಾವೇಶ ನಡೆಸುವ ಸಂಬಂಧ ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿಸ್ವಾಮಿಯ ಸಾನಿಧ್ಯದಲ್ಲಿ ಜರುಗಿದ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಹೋರಾಟಕ್ಕೆ ಇನ್ನೂ ಕೆಲವರು ನಮ್ಮನ್ನು ಆಹ್ವಾನಿಸಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಹೋರಾಟಕ್ಕೆ ಆಹ್ವಾನ ಕೊಟ್ಟು ಕರೆಯುವುದಲ್ಲ, ಅವರೇ ಸ್ವಯಂಪ್ರೇರಿತವಾಗಿ ಬಂದು ಸೇರ್ಪಡೆಯಾಗುವಂತಹ ಆಂದೋಲನ ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಸುಮ್ಮನೆ ಕೂತಿದ್ದರೆ ಎಸ್ಟಿ ಮೀಸಲು ಸಿಗುವುದಿಲ್ಲ. ಕೇಂದ್ರ ಸರಕಾರದ ಒಲವನ್ನು ಗಳಿಸಿಕೊಳ್ಳಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಗಮನಕ್ಕೆ ಬರುವ ರೀತಿಯಲ್ಲಿ ಆಂದೋಲನ ನಡೆಸಬೇಕು. ಯಾರು ಬರುತ್ತಾರೆ, ಯಾರು ಬಂದಿಲ್ಲ ಎಂದು ಚರ್ಚೆಗಳು ಮಾಡಿಕೊಂಡು ಕೂತರೆ ಯಾವುದೆ ಪ್ರಯೋಜನವಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ನಮ್ಮ ಉದ್ದೇಶ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಸೌಲಭ್ಯ ಪಡೆಯುವುದು. ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲರೂ ಸಂಘಟಿತರಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟವನ್ನು ಮುಂದುವರಿಸೋಣ ಎಂದು ಈಶ್ವರಪ್ಪ ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಸಮಿತಿ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ್ ಮೂರ್ತಿ, ಮಾಜಿ ಮೇಯರ್ ಜೆ.ಹುಚ್ಚಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







