ಗುಜರಾತ್: ಭೂ ಕಬಳಿಕೆ ವಿರುದ್ಧ ಕಠಿಣ ಕಾನೂನು ಜಾರಿ
ಗಾಂಧೀನಗರ, ಡಿ.16: ಭೂ ಕಬಳಿಕೆಯನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಠಿಣ ಕಾನೂನು ಬುಧವಾರದಿಂದ ಜಾರಿಗೆ ಬಂದಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಘೋಷಿಸಿದ್ದಾರೆ. ‘ದಿ ಗುಜರಾತ್ ಲ್ಯಾಂಡ್ ಗ್ರಾಬಿಂಗ್(ಪ್ರೊಹಿಬಿಷನ್) ಆ್ಯಕ್ಟ್ 2020ಗೆ ರಾಜ್ಯಪಾಲರು ಅಕ್ಟೋಬರ್ 8ರಂದು ಸಹಿ ಹಾಕಿದ್ದು, ಕಾನೂನು ಉಲ್ಲಂಘಿಸುವವರಿಗೆ 14 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಸಣ್ಣ ರೈತರ ಮತ್ತು ನಾಗರಿಕರ ಹಿತರಕ್ಷಣೆಯ ನಿಟ್ಟಿನಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕಾನೂನು ಬುಧವಾರದಿಂದಲೇ ಜಾರಿಗೆ ಬಂದಿದೆ. ಕಾನೂನಿನ ಸಮರ್ಪಕ ಪಾಲನೆಗಾಗಿ ಪ್ರತೀ ಜಿಲ್ಲೆಯಲ್ಲೂ ಸಮಿತಿ ಹಾಗೂ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗುವುದು. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ಉಲ್ಲಂಘಿಸುವವರನ್ನು ಶಿಕ್ಷಿಸಲಾಗುವುದು. ಭೂ ಕಬಳಿಕೆದಾರರಿಗೆ ಬಲಿಪಶುಗಳಾಗುತ್ತಿರುವ ಸಣ್ಣ ರೈತರು ಮತ್ತು ಪ್ರಜೆಗಳ ಹಿತರಕ್ಷಣೆಗೆ ಸರಕಾರ ಬದ್ಧವಾಗಿದೆ.
ಇದುವರೆಗೆ ಸುದೀರ್ಘಾವಧಿಯ ಭೂ ವ್ಯಾಜ್ಯಕ್ಕೆ ಹಿಂಜರಿದು ಜಮೀನನ್ನು ಮಾರುವ ಒತ್ತಡಕ್ಕೆ ಕಟ್ಟುಬೀಳುತ್ತಿದ್ದ ಪ್ರಜೆಗಳ ರಕ್ಷಣೆಗೆ ಈ ಕಾನೂನು ಜಾರಿಯಾಗಿದೆ. ಕಾನೂನಿನಂತೆ, ಭೂ ಕಬಳಿಕೆಗೆ ಸಂಬಂಧಿಸಿ ಸೂಕ್ತ ಸಾಕ್ಷದ ಸಹಿತ ಸಲ್ಲಿಕೆಯಾಗುವ ದೂರನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದ 7 ಸದಸ್ಯರ ಸಮಿತಿ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ತಪ್ಪಿತಸ್ಥರಿಗೆ 10ರಿಂದ 14 ವರ್ಷದ ಜೈಲುಶಿಕ್ಷೆ ಹಾಗೂ ಸಂಬಂಧಿತ ಭೂಮಿಯ ಸರಕಾರಿ ಮೌಲ್ಯಮಾಪನದ ದರವನ್ನು ದಂಡವಾಗಿ ಪಾವತಿಸಬೇಕು ಎಂದು ಸರಕಾರದ ಮೂಲಗಳು ಹೇಳಿವೆ.







