2017ರಿಂದ ಭಾರತ ಪ್ರವೇಶಿಸಿರುವುದಕ್ಕಿಂತ ತೊರೆದ ಬಾಂಗ್ಲಾದೇಶಿ ವಲಸಿಗರೇ ಅಧಿಕ
ಹೊಸದಿಲ್ಲಿ, ಡಿ. 16: ಭಾರತವನ್ನು ತೊರೆಯುವ ಸಂದರ್ಭ ಸೆರೆ ಹಿಡಿಯಲಾದ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಅಕ್ರಮ ಮಾರ್ಗದಿಂದ ದೇಶ ಪ್ರವೇಶಿಸಿದವರ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ (ಎನ್‌ಸಿಆರ್‌ಬಿ) ದತ್ತಾಂಶ ಬಹಿರಂಗಪಡಿಸಿದೆ ಎಂದು ‘ದಿ ಹಿಂದೂ’ ವರದಿ ಹೇಳಿದೆ.
2020 ಡಿಸೆಂಬರ್ 14ರ ವರೆಗೆ ಬಾಂಗ್ಲಾದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ 3,173 ಅಕ್ರಮ ವಲಸಿಗರನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿತ್ತು. ಇನ್ನೊಂದೆಡೆ, ಇದೇ ಅವಧಿಯಲ್ಲಿ ಅಕ್ರಮ ಮಾರ್ಗವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದ 1,115 ಅಕ್ರಮ ವಲಸಿಗರನ್ನು ಬಿಎಸ್‌ಎಫ್ ಸೆರೆ ಹಿಡಿದಿತ್ತು. ಭಾರತವನ್ನು ತೊರೆದ ಬಾಂಗ್ಲಾದೇಶಿಗಳ ಸಂಖ್ಯೆ 2017ರಿಂದ 2019ರ ಅವಧಿಯಲ್ಲಿ ಏರಿಕೆಯಾಗುತ್ತಾ ಬಂದಿದೆ. 2017ರಲ್ಲಿ 821, 2018ರಲ್ಲಿ 2,971 ಹಾಗೂ 2019ರಲ್ಲಿ 2,638 ಬಾಂಗ್ಲಾದೇಶಿ ವಲಸಿಗರು ಭಾರತ ತೊರೆದಿದ್ದಾರೆ. ಇದೇ ರೀತಿ 2017ರಲ್ಲಿ 871, 2018ರಲ್ಲಿ 1,118, 2019ರಲ್ಲಿ 1,351 ಬಾಂಗ್ಲಾದೇಶಿ ವಲಸಿಗರು ಅಕ್ರಮ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದಾರೆ.
ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯರು ಅಕ್ರಮವಾಗಿ ಸಂಚರಿಸುತ್ತಿದ್ದಾರೆ. ಆದರೆ, 2107ರ ವರೆಗಿನ ದತ್ತಾಂಶ ಮಾತ್ರ ಲಭ್ಯವಿದೆ. ಯಾವುದೇ ಮೌಲ್ಯಯುತ ಪುರಾವೆ ಇಲ್ಲದೆ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ 892ಕ್ಕೂ ಅಧಿಕ ಭಾರತೀಯರನ್ನು ಸೆರೆ ಹಿಡಿಯಲಾಗಿದೆ. ಇದರೊಂದಿಗೆ ದಾಖಲೆಗಳು ಇಲ್ಲದೆ ದೇಶದಿಂದ ಬಾಂಗ್ಲಾದೇಶಕ್ಕೆ ಪ್ರವೇಶಿಸದ ಭಾರತೀಯ ಸಂಖ್ಯೆ 276. ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಬಾರದು ಎಂಬ ಸೂಚನೆ ಇರುವುದರಿಂದ ದೇಶವನ್ನು ತ್ಯಜಿಸುವ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಹೆಚ್ಚಿರಬಹುದು ಎಂದು ಸರಕಾರದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ‘ದಿ ಹಿಂದೂ’ ಉಲ್ಲೇಖಿಸಿದೆ.
ಕೊರೋನ ಸೋಂಕು ಹರಡಿರುವುದರಿಂದ ಹಾಗೂ ಉದ್ಯೋಗದ ಕೊರತೆ ಇರುವುದರಿಂದ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ‘‘ಒಂದು ವೇಳೆ ಅವರನ್ನು ವಶಕ್ಕೆ ತೆಗೆದುಕೊಂಡರೆ, ಅವರನ್ನು ಹಿಂದೆ ಕಳುಹಿಸಬೇಕು. ಬಂಧಿಸಿದರೆ, ದೀರ್ಘ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಬೇಕು. ಅಲ್ಲದೆ, ಅಕ್ರಮ ವಲಸಿಗರನ್ನು ಅವರ ರಾಷ್ಟ್ರೀಯತೆ ಸಾಬೀತಾಗುವ ವರೆಗೆ ಆಶ್ರಯಧಾಮ ಅಥವಾ ಬಂಧನ ಕೇಂದ್ರದಲ್ಲಿ ಇರಿಸಬೇಕು’’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು ‘ದಿ ಹಿಂದೂ’ ಉಲ್ಲೇಖಿಸಿದೆ. 2020 ಆಗಸ್ಟ್ 1 ಹಾಗೂ ನವೆಂಬರ್ 15ರ ನಡುವೆ ಅಜಾಗರೂಕತೆಯಿಂದ ಭಾರತ ಪ್ರವೇಶಿಸಿದ 50 ಬಾಂಗ್ಲಾದೇಶಿಯರನ್ನು ಸದ್ಭಾವನೆಯ ಹಾಗೂ ದ್ವಿಪಕ್ಷೀಯ ಒಪ್ಪಂದದ ಸುಧಾರಣೆಯ ಪ್ರತಿಬಿಂಬದ ಭಾಗವಾಗಿ ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಡಿ)ಗೆ ಹಸ್ತಾಂತರಿಸಲಾಗಿತ್ತು.







