ಬೆಂಗಳೂರಿನಲ್ಲಿ ರೈತ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ: ಕೃಷಿ ಕಾಯ್ದೆ ರದ್ದುಗೊಳಿಸಲು ಬಿಗಿಪಟ್ಟು
ಬೆಂಗಳೂರು, ಡಿ.16: ಕೃಷಿ ಸಂಬಂಧಿತ ಮೂರು ಕಾನೂನು, ಜತೆಗೆ ವಿದ್ಯುತ್ ಮಸೂದೆ ಅನ್ನು ಕೇಂದ್ರ ಸರಕಾರ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿವೆ.
ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಐಕ್ಯ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ ರೈತ ಮುಖಂಡರು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕಳೆದ 20 ದಿನಗಳಿಂದ ರೈತರು ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದು, ತಮ್ಮ ಬೇಡಿಕೆ ಈಡೇರಿಸುವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ರೈತರಿಗೆ ಮಾರಕವಾಗುವ ಕೃಷಿ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿವೆ. ಇವು ಜಾರಿಯಾದರೆ ರೈತ ಸಮುದಾಯಕ್ಕೆ ಮರಣ ಶಾಸನ ಬರೆದಂತಾಗುತ್ತದೆ. ಹೀಗಾಗಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಹೋರಾಟ ಮಾಡುತ್ತಿರುವುದಾಗಿ ಧರಣಿ ನಿರತ ರೈತ ಮುಖಂಡರು ಹೇಳಿದರು.
ಭೂ ಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಮಸೂದೆಗಳನ್ನು ರಾಜ್ಯ ಸರಕಾರ ರದ್ದು ಮಾಡಬೇಕು. ಜತೆಗೆ, ಕೇಂದ್ರದ ಕಾಯ್ದೆಗಳಿಗೆ ರಾಜ್ಯವೂ ಮಾನ್ಯತೆ ನೀಡಬಾರದು. ಅದೇ ರೀತಿ, ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾಯ್ದೆಗಳನ್ನು ಈ ಕೂಡಲೇ ಜಾರಿಗೊಳಿಸುವಂತೆ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ರೈತಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚಿಂತಕಿ ಕೆ.ಎಸ್.ವಿಮಲಾ, ಬಸವರಾಜ ಗುರುಪ್ರಸಾದ್, ಕಾಳಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಅನ್ನ ತಿನ್ನುವವರ ಹೋರಾಟ
ಕೃಷಿ ಕಾನೂನುಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ನಡೆಯುತ್ತಿರುವ ಹೋರಾಟವೂ ರೈತರಿಗೆ ಮಾತ್ರ ಸೀಮಿತವಲ್ಲ. ಬದಲಾಗಿ, ಇದು ಅನ್ನ ತಿನ್ನುವವರ ಹೋರಾಟವಾಗಿದೆ. ಈ ಕರಾಳ ಕಾನೂನುಗಳು ಜಾರಿಯಾದರೆ, ಸ್ವಾವಲಂಬಿ ಆಹಾರಕ್ಕೆ ಕೊಡಲಿ ಪೆಟ್ಟು ಬೀಳಲಿದೆ.
-ಕೆ.ಎಸ್.ವಿಮಲಾ, ಚಿಂತಕಿ







