ರಾಜ್ಯದಲ್ಲಿ 28 ಶಾಲೆಗಳು ಪುನಾರಂಭ: ‘ವಿದ್ಯಾರ್ಥಿ ನಡೆ ಶಾಲೆಯ ಕಡೆ’ ಅಭಿಯಾನಕ್ಕೆ ಲಘು ಯಶಸ್ಸು
ಮಂಗಳೂರು, ಡಿ.16: ರಾಜ್ಯದ ಶಾಲಾ ಎಸ್‌ಡಿಎಂಸಿಗಳ ಸಮನ್ವಯ ವೇದಿಕೆಯ ಪ್ರಯತ್ನದಿಂದಾಗಿ ‘ವಿದ್ಯಾರ್ಥಿ ನಡೆ ಶಾಲೆಯ ಕಡೆ’ ಅಭಿಯಾನವು ಜನಮನ್ನಣೆ ಪಡೆದು, ಕೊನೆಗೂ ಶಾಲೆಗಳು ಬುಧವಾರ ಪುನಃ ಆರಂಭಗೊಂಡಿವೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಶಿಕ್ಷಣ ವ್ಯವಸ್ಥೆಯೇ ಅಕ್ಷರಶಃ ನಲುಗಿ ಹೋಗಿತ್ತು. ಈ ನಡುವೆ ಸರಕಾರವು ವಿದ್ಯಾಗಮ ಯೋಜನೆ ಆರಂಭಿಸಿ, ಏಳುಬೀಳು ಕಂಡಿತು. ಬಳಿಕ ರಾಜ್ಯದ ಶಾಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಪ್ರಯತ್ನದಿಂದಾಗಿ ‘ವಿದ್ಯಾರ್ಥಿ ನಡೆ ಶಾಲೆಯ ಕಡೆ’ ಅಭಿಯಾನ ಆರಂಭಿಸಿ, ಸದ್ಯ ತುಸು ಯಶಸ್ಸು ಕಂಡಿದೆ.
ರಾಜ್ಯದಲ್ಲಿ 28 ಶಾಲೆಗಳು ವಿದ್ಯಾರ್ಥಿಗಳಿಗಾಗಿ ತೆರೆದುಕೊಂಡಿವೆ. ವಿದ್ಯಾರ್ಥಿಗಳು ಉತ್ಸುಕರಾಗಿ ಆಟ-ಪಾಠಗಳಲ್ಲಿ ತೊಡಗಿಸಿಕೊಂಡರು. ಹಲವು ದಿನಗಳಿಂದ ಸಮರ್ಪಕ ತರಗತಿಗಳಿಲ್ಲದೆ ಕೊರಗಿದ್ದ ಶಿಕ್ಷಕ-ವಿದ್ಯಾರ್ಥಿ-ಪೋಷಕರು ಕೊನೆಗೂ ನಿಟ್ಟುಸಿರು ಬಿಡುವಂತಾಯಿತು.
ಕೊಡಗು ಜಿಲ್ಲೆಯಲ್ಲಿ ಎಂಟು, ದ.ಕ.- ಏಳು, ಉಡುಪಿ-ಐದು ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 28 ಶಾಲೆಗಳು ಬಹುದಿನಗಳ ನಂತರ ತೆರೆದಿವೆ. ಶಾಲೆ ತೆರೆದ ಬಗ್ಗೆ ಸಾರ್ವಜನಿಕ ವಲಯ ಸ್ವಾಗತಿಸಿದೆ.
ಸರಕಾರಿ ಆದೇಶ; ಗೊಂದಲ ಸೃಷ್ಟಿಸಿದ ಶಿಕ್ಷಕರು: ಸಮನ್ವಯ ವೇದಿಕೆಯು ನಿರಂತರವಾಗಿ ‘ವಿದ್ಯಾರ್ಥಿ ನಡೆ ಶಾಲೆಯ ಕಡೆ’ ಅಭಿಯಾನ ಹಮ್ಮಿಕೊಂಡಿರುವುದರ ಫಲವಾಗಿ ಶಾಲೆಗಳು ಕೊನೆಗೂ ತೆರೆಯಲು ಅವಕಾಶ ದೊರೆಯಿತು. ಅಭಿಯಾನಕ್ಕೆ ತಡೆವೊಡ್ಡುವ ನೆಪದಲ್ಲಿ ರಾಜ್ಯ ಸರಕಾರವು ಡಿ.15ರ ರಾತ್ರಿ ಆದೇಶ ಹೊರಡಿಸಿ, ವಿದ್ಯಾಗಮ ಯೋಜನೆಯನ್ನೇ ಮುಂದುವರಿಸುವ ಬಗ್ಗೆ ಸೂಚನೆ ಹೊರಡಿಸಿತ್ತು.
ಆದರೆ, ಏಳು ಪುಟಗಳಿರುವ ಸರಕಾರಿ ಆದೇಶದಲ್ಲಿ ಎಲ್ಲಿಯೂ ಸ್ಪಷ್ಟತೆ ಇಲ್ಲ. ಯೋಜನೆಯ ಪುನಾರಂಭವಾಗಲಿ, ಶಿಕ್ಷಕರು, ಶಾಲಾಭಿವೃದ್ಧಿ, ಬಿಸಿಯೂಟ, ಅನುದಾನ ಬಿಡುಗಡೆಯಾಗಲೀ ಯಾವೊಂದು ಅಂಶವನ್ನು ಉಲ್ಲೇಖಿಸದಿರುವುದು ಸರಿಯಾದ ನಿರ್ಧಾರವಲ್ಲ ಎಂದು ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದೀನ್ ಕುಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಆದೇಶವನ್ನು ಇಟ್ಟುಕೊಂಡು ಹಲವು ಶಾಲೆಗಳ ಶಿಕ್ಷಕರು ಎಸ್‌ಡಿಎಂಸಿ ಸಮಿತಿಗಳಲ್ಲಿ ಗೊಂದಲ ಸೃಷ್ಟಿಸಿದ್ದರು. ಇದರಿಂದಾಗಿ ಶಾಲೆ ಆರಂಭವಾಗುವ ಪ್ರಕ್ರಿಯೆಯಲ್ಲಿ ಅಲ್ಪ ಪ್ರಮಾಣದ ಹಿನ್ನಡೆಯಾಗಿರುವುದು ನಿಜ. ಆದರೆ ಶಾಲೆ ಆರಂಭವಾಗಿರುವುದು ಸಂತಸ ತಂದಿದೆ ಎಂದು ಕುಟ್ಟಿ ಸಂತಸ ವ್ಯಕ್ತಪಡಿಸಿದರು.
ದ.ಕ. ಜಿಲ್ಲೆಯ ಗಡಿ ಪ್ರದೇಶದ ಒಡ್ಯಾ ಗ್ರಾಮದ ಸರಕಾರಿ ಶಾಲೆ ಬುಧವಾರ ವಿದ್ಯಾರ್ಥಿಗಳಿಗಾಗಿ ಮುಕ್ತವಾಗಿ ತೆರೆದುಕೊಂಡಿತು. 50 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ 15ಕ್ಕೂ ಹೆಚ್ಚು ಪೋಷಕರು ಆಗಮಿಸಿದ್ದರು. ತಮ್ಮ ಗ್ರಾಮದಲ್ಲಿ ಕೊರೋನ ಸೋಂಕಿನ ಹರಡುವಿಕೆಯೇ ಇಲ್ಲ. ಇಂತಹ ಒಳ್ಳೆಯ ವಾತಾವರಣ ಇರುವ ಗ್ರಾಮದಲ್ಲಿ ಶಾಲೆ ಆರಂಭಿಸುವುದು ಸ್ವಾಗತಾರ್ಹವೆಂದು ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳುತ್ತಾರೆ ಕುಟ್ಟಿ.
ಉಚಿತ ಬಸ್‌ಪಾಸ್‌ಗೆ ಆಗ್ರಹ: ಕೋವಿಡ್‌ನ ಈ ಸಂಕಷ್ಟದ ವರ್ಷದಲ್ಲಿ 2021ರ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಗಳು ಉಚಿತವಾಗಿ ಬಸ್‌ನಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಬಸ್‌ಪಾಸ್‌ಗೆ ಪ್ರತ್ಯೇಕವಾಗಿ ಬಸ್‌ಪಾಸ್ ವಿತರಿಸದೇ ಶಾಲಾ ಗುರುತಿನ ಚೀಟಿಯನ್ನೇ ‘ಬಸ್‌ಪಾಸ್’ ಎಂದು ಪರಿಗಣಿಸಲು ಸರಕಾರ ಆದೇಶಿಸಬೇಕು. ಇದರಿಂದ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದೀನ್ ಕುಟ್ಟಿ ತಿಳಿಸಿದ್ದಾರೆ.