ದಿಲ್ಲಿ-ಹರ್ಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತ ಮೃತ್ಯು

ಹೊಸದಿಲ್ಲಿ, ಡಿ.17: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ-ಹರ್ಯಾಣ ಗಡಿಯ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್‌ನ ರೈತರೊಬ್ಬರು ದಿಲ್ಲಿಯ ತೀವ್ರ ಚಳಿಯಿಂದ ಅಸ್ವಸ್ಥರಾಗಿ ಗುರುವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
37 ವರ್ಷದ ಈ ರೈತನಿಗೆ 10, 12 ಮತ್ತು 14 ವರ್ಷದ ಮೂವರು ಮಕ್ಕಳಿದ್ದಾರೆ. ಸರಕಾರ ರೈತರಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಜೀವತ್ಯಾಗ ಮಾಡುತ್ತೇನೆ ಎಂದು ಡೆತ್‌ನೋಟ್ ಬರೆದಿಟ್ಟು ಸಿಖ್ ಧರ್ಮಗುರು ಬಾಬಾ ರಾಮ್‌ಸಿಂಗ್ ಎಂಬವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಘಟನೆಯ ಕೆಲವು ಗಂಟೆಗಳ ಬಳಿಕ ರೈತನ ಮರಣ ಸಂಭವಿಸಿದೆ. ನವೆಂಬರ್ ಅಂತ್ಯದಲ್ಲಿ ಪ್ರತಿಭಟನೆ ಆರಂಭವಾದಂದಿನಿಂದ ಇದುವರೆಗೆ 20ಕ್ಕೂ ಹೆಚ್ಚು ಪ್ರತಿಭಟನಾನಿರತರು ಮೃತಪಟ್ಟಿರುವುದಾಗಿ ರೈತ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಬಹುತೇಕ ಸಾವಿನ ಪ್ರಕರಣಕ್ಕೆ ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತಗಾಳಿ ಮತ್ತು ಕೊರೆಯುವ ಚಳಿ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ದಿಲ್ಲಿ ಬಳಿಯ ಹೆದ್ದಾರಿಯ ವಿವಿಧೆಡೆ ಪ್ರತಿಭಟನಾ ನಿರತರಾಗಿರುವ ರೈತರಿಗೆ ಹಲವರು ಕಂಬಳಿ, ಸ್ವೆಟರ್, ಹೀಟರ್‌ಗಳನ್ನು ಒದಗಿಸಿದ್ದಾರೆ. ರಸ್ತೆ ಬದಿ ಕಸಕಡ್ಡಿಗಳಿಗೆ ಬೆಂಕಿ ಹೊತ್ತಿಸಿ ಚಳಿಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ. ಎಷ್ಟೇ ಕಷ್ಟವಾದರೂ ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟುಹಿಡಿದಿದ್ದಾರೆ. ಕಳೆದ ಕೆಲವು ದಿನಗಳಿಂದ ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಾಪಮಾನ ಸುಮಾರು 5 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿದೆ.







