ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಸಂಸ್ಮರಣಾ ಕಾರ್ಯಕ್ರಮ

ಉಡುಪಿ, ಡಿ.17: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಪ್ರಥಮ ಆರಾಧನೆಯ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮವನ್ನು ಮಠದ ರಾಜಾಂಗಣ ದಲ್ಲಿ ಬುಧವಾರ ನರಹರಿತೀರ್ಥ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ವಹಿಸಿದ್ದ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶ ಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವೇಶತೀರ್ಥರು ಸರಳ ವ್ಯಕ್ತಿತ್ವದೊಂದಿಗೆ ಸಾಮಾನ್ಯ ಜನರಿಗೂ ಬೇಕಾದವರಾಗಿದ್ದರು. ನಿಸ್ವಾರ್ಥದಿಂದ ಸಮಾಜಕ್ಕೋಸ್ಕರ ಮಧ್ವಾಚಾರ್ಯರ ತತ್ವದೊಂದಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು. ನಿತ್ಯಸಂಚಾರಿಗಳಾಗಿ ದೇಶದೆಲ್ಲೆಡೆ ತನ್ನ ಛಾಪನ್ನು ಮೂಡಿಸಿ, ಆರ್ತರಿಗೆ ಸ್ಪಂದಿಸಿದ ಏಕೈಕ ಸನ್ಯಾಸಿಯಾಗಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀವಿಶ್ವೇಶತೀರ್ಥ ಗುರುಗಳನ್ನು ಚಾತುರ್ಮಾಸ್ಯ ವೃತ ವೊಂದನ್ನು ಬಿಟ್ಟು ಮತ್ಯಾರಿಂದಲೂ ಕಟ್ಟಿಹಾಕಲು ಸಾಧ್ಯವಾಗಿರಲಿಲ್ಲ. ಮಧ್ವಾಚಾರ್ಯರ ಮಾತಿನಂತೆ ’ನಾನಾಜನಸ್ಯ ಶುಶ್ರೂಷೆಯಲ್ಲಿ’ ನಿರತರಾಗಿದ್ದ ಗುರುಗಳ ಅನಂತ ನೆನಪುಗಳನ್ನು ಮಾಡಿ ಅದರಂತೆ ನಡೆಯುವ ಆದರ್ಶವ್ನು ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ವಾಸಂರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಮತ್ತು ಓಂಪ್ರಕಾಶ್ ಭಟ್ ಸಂಪಾದಿಸಿದ ಪೇಜಾವರ ಸ್ವಾಮೀಜಿಯ ಉಪನ್ಯಾಸ ಮತ್ತು ಲೇಖನಗಳಲ್ಲಿ ಪ್ರಸ್ತುತಗೊಂಡ ಚಿಂತನೆಗಳ ಸಂಗ್ರಹ ‘ಚಿಂತನ ಶೇವಧಿ’ ಬಿಡು ಗಡೆಗೊಂಡಿತು. ಸೋದೆ ಮಠಾಧೀಶ ಶ್ರೀವಿಶ್ವವಲ್ಲ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.







