ಮುಂದಿನ 2 ವರ್ಷಗಳಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ: ಸಿಎಂ ಯಡಿಯೂರಪ್ಪ
‘ಬೆಂಗಳೂರು ಮಿಷನ್-2022’ ಸಮಾರಂಭ

ಬೆಂಗಳೂರು, ಡಿ. 17: ‘ಬೆಂಗಳೂರು ಮಿಷನ್-2022’ ಅಡಿಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಗುರಿ ಸಾಧಿಸಲಾಗುವುದು ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ‘ಬೆಂಗಳೂರು ಮಿಷನ್-2022’ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರಿಗೆ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಘನ ತ್ಯಾಜ್ಯ ವಿಲೇವಾರಿ, ರಾಜ ಕಾಲುವೆಗಳ ಸಮಗ್ರ ನಿರ್ವಹಣೆ, ಕೆರೆಗಳ ಅಭಿವೃದ್ಧಿ, ಜನಸಂಪರ್ಕ ಸೇರಿದಂತೆ ಇನ್ನಿತರ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.
ನಗರದ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಸ್ಪಷ್ಟ ಮುನ್ನೋಟದೊಂದಿಗೆ ಸಿದ್ಧಪಡಿಸಿರುವ ಯೋಜನೆಯು ಬೆಂಗಳೂರನ್ನು ಎಲ್ಲ ಆಯಾಮಗಳಲ್ಲಿಯೂ ವಿಶ್ವದರ್ಜೆಯ ನಗರವಾಗಿ ರೂಪಿಸಲಾಗುವುದು ಎಂದ ಅವರು, ಹೊಸ ಉದ್ಯಾನಗಳು ಮತ್ತು ಬೃಹತ್ ವೃಕ್ಷ ಉದ್ಯಾನಗಳನ್ನೂ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಮತ್ತು ಎನ್‍ಜಿಇಎಫ್ ಕಾರ್ಖಾನೆಗಳ ಜಮೀನಿನಲ್ಲಿ ಕಲೆ, ರಂಗಭೂಮಿಗೆ ಸಂಬಂಧಿಸಿದ ಸಾಂಸ್ಕೃತಿಕ ಮ್ಯೂಸಿಯಂ ನಿರ್ಮಿಸಲಾಗುವುದು. ಬೆಂಗಳೂರಿನ ಇತಿಹಾಸ ದಾಖಲಿಸುವ ಮ್ಯೂಸಿಯಂ ನಿರ್ಮಾಣವಾಗಲಿದೆ ಎಂದು ಯಡಿಯೂರಪ್ಪ ಘೋಷಿಸಿದರು.
ನಗರದ ವಾಹನ ದಟ್ಟಣೆ ತಪ್ಪಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪ್ರಮುಖ 12 ಮಾರ್ಗಗಳನ್ನು ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುವುದು. 400 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದ ಅವರು, ರಸ್ತೆಗಳ ಅತ್ಯುತ್ತಮ ನಿರ್ವಹಣೆ, ಸಂಚಾರ ಪರಿಕರಗಳ ಅಳವಡಿಕೆ ಹಾಗೂ ಸಮನ್ವಯ ಹೊಂದಿದ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನನ್ನ ಕಸ- ನನ್ನ ಜವಾಬ್ದಾರಿ: ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ‘ನನ್ನ ಕಸ-ನನ್ನ ಜವಾಬ್ದಾರಿ’ ಎಂಬ ಯೋಜನೆ ರೂಪಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ತರಬೇತಿಯನ್ನೂ ನೀಡಲಾಗುವುದು ಎಂದು ಯಡಿಯೂರಪ್ಪ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದ್ದು, ಇನ್ನು ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದರು.
ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರಿನ ಬದುಕಿನಲ್ಲಿ ಜೀವಸೆಲೆಯೂ ಚಿಮ್ಮುತ್ತಿರಬೇಕು. ಅಂತಹ ಅಭಿವೃದ್ಧಿ ಸಾಧ್ಯವಾಗಬೇಕೆನ್ನುವುದು ಬೆಂಗಳೂರು ಮಿಷನ್-2022 ಆಶಯ. ಭವಿಷ್ಯದ ಬೆಂಗಳೂರನ್ನು ಕೇಂದ್ರೀಕರಿಸಿ ಯೋಜನೆ ಮಿಷನ್ 2022 ರೂಪಿಸಿದ್ದು, ಎಲ್ಲರೂ ಸೇರಿ ನಿಗದಿತ ಅವಧಿಯೊಳಗೆ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಬೈರತಿ ಬಸವರಾಜ, ಆಹಾರ ಸಚಿವ ಕೆ.ಗೋಪಾಲಯ್ಯ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸೇರಿದಂತೆ ಇನ್ನಿತರರು ಹಾಜರಿದ್ದರು.







